ಚುನಾವಣೆ ಹತ್ತಿರ ಬರುತ್ತಿದೆ. ಮತದಾರರು ತಾವು ಆರಿಸುವ ಪ್ರತಿನಿಧಿ ಎಂಥವನಿ/ಳಿರಬೇಕೆಂದು ಸರಿಯಾಗಿ ಯೋಚಿಸಿ, ವಿಧಾನಸಭೆಗೆ ಗೌರವದಿಂದ ಕಳುಹಿಸಿಕೊಡುವ ಕಾಲ. ನಾವು ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡದೆ ಹೋದರೆ, ಮುಂದಿನ ದಿನಗಳಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು ಎಂಬ ಆತಂಕ. ಸ್ವತಂತ್ರೋತ್ತರ ಭಾರತದಲ್ಲಿ ನಡೆದುಹೋದ ಎಲ್ಲಾ ಚುನಾವಣೆಗಳ ಬಳಿಕ ಮತದಾರರು ತಾವು ಮಾಡಿದ ತಪ್ಪಿನಿಂದಾಗಿ ಪರಿತಪಿಸುವುದು ನಡೆದೇ ಇರುತ್ತದೆ. ಆಧುನಿಕೋತ್ತರ ಇಂಗ್ಲೆಂಡ್ ನ ಒಬ್ಬ ಶ್ರೇಷ್ಠ ಕಾದಂಬರಿಕಾರ ಚಾರ್ಲ್ಸ್ ಡಿಕಿನ್ಸ್ ನ ಕಾದಂಬರಿ ‘ ಹಾರ್ಡ್ ಟೈಮ್ಸ್’ ನ ಪಾತ್ರವೊಂದು ಜನಸಾಮಾನ್ಯರ ಬದುಕನ್ನು ಪ್ರತಿನಿಧಿಸುತ್ತಾ… We made him Member of Parliament , one of the …deaf honourable gentlemen, blind honourable gentlemen, dead honourable gentlemen; to every other consideration. Wherefore live we in a Christian land, eighteen hundred and odd years after our Master?’ (Book I, Chapter 14), ಅರ್ಥಾತ್: ಅವನನ್ನು ನಮ್ಮ ಪ್ರತಿನಿಧಿಯಾಗಿ ಆರಿಸಿದೆವು, ಅವನೊಬ್ಬ ಈಗ ಗಣ್ಯನಾಗಿಬಿಟ್ಟಿದ್ದಾನೆ; ಕಿವುಡ ಗೌರವಾನ್ವಿತರೇ, ಮೂಗ ಗೌರವಾನ್ವಿತರೇ, ಅಂಧ ಗೌರವಾನ್ವಿತರೇ, ಸತ್ತ ಗೌರವಾನ್ವಿತರೇ, ಇನ್ನೂ ಮುಂತಾದ ಗಣ್ಯರೇ, ಗೌರವಾನ್ವಿತರೇ … ಸಾವಿರದ ಎಂಟುನೂರು ವರ್ಷಾನಂತರದ, ನಮ್ಮ ಗುರುವಿನ ಈ ಪವಿತ್ರ ಕ್ರಿಶ್ಚಿಯನ್ ಲ್ಯಾಂಡ್ ನಲ್ಲಿ ಎಲ್ಲಿ ಬದುಕಲಿ? ಎಂದು ಕಾದಂಬರಿಯ ಪಾತ್ರವೊಂದು ತನ್ನ ನೋವನ್ನು ತೋಡಿಕೊಳ್ಳುತ್ತದೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರೊಫೆಸರ್ ಜಾರ್ಜ್ ಗೋರ್ಡನ್ ಹೀಗೊಮ್ಮೆ ಹೇಳಿದ್ದರು: England is sick. Churches having failed, social remedies being slow … English literature has triple functions: delight and instruct us, above all, to save our souls and heal the state. ಈಗ ನಮಗೆ ಬೇಕಿರುವುದು, ನಮ್ಮ ಬದುಕಿನಲ್ಲಿ ಸಂತೋಷ, ಸರಿಯಾದ ಮಾರ್ಗದರ್ಶನ, ರೋಗಗ್ರಸ್ಥ ರಾಜ್ಯಕ್ಕೆ ಸರಿಯಾದ ಮದ್ದು. ಈ ಮೂರೂ ಜನತೆಗೆ, ಮತ್ತು ರಾಜ್ಯಕ್ಕೆಸಾಹಿತ್ಯದಿಂದ ದೊರೆಯಲಿ ಎಂದು ಆಶಿಸುತ್ತಾರೆ. ಇಂಗ್ಲೆಂಡ್ ನ ಈ ಇಬ್ಬರು ಮಹನೀಯರ ಕಳಕಳಿ ಒಂದೇ ಆಗಿದೆ. ಸಂತೋಷವಿಲ್ಲದ ಜನಸಾಮಾನ್ಯನ ಬದುಕಿಗೆ, ರೋಗಗ್ರಸ್ಥ ರಾಜ್ಯ ವ್ಯವಸ್ಥೆಗೆ ಪ್ರಾಣವಾಯು(ಆಮ್ಲಜನಕ) ಬೇಕಾಗಿದೆ. ಈ ಪರಿಸ್ಥಿತಿ ಜಗತ್ತಿನಾದ್ಯಂತ ಇದೆಯಲ್ಲದೆ ಜನತೆ, ಸೂಕ್ತವಾದ ಪ್ರತಿನಿಧಿಗಳನ್ನು ಹುಡುಕುವಲ್ಲಿ ವಿಫಲರಾಗಿದ್ದಾರೆ, ಅಲ್ಲದೇ, ತಮ್ಮಲ್ಲೇ ಇರುವ ಸ್ತುಪ್ತ ಪ್ರಜ್ಞೆ ಯನ್ನು ಸರಿಯಾಗಿ ಗುರುತಿಸಿಕೊಂಡು ಬದುಕಲೂ ಸಹ ಅಸಹಾಯರಾಗಿದ್ದಾರೆ.
ನಮ್ಮ ಮಹಾನ್ ಭಾರತದಲ್ಲಿ ನಿರೀಕ್ಷೆಗೆ ಸರಿಯಾದ ಅಭ್ಯರ್ಥಿಗಳು ಇಲ್ಲವೆಂದಲ್ಲ, ಅಂತಹವರನ್ನು ನಾವು ಗೆಲಿಸುವುದಿರಲಿ, ಅಂತಹ ಒಳ್ಳೆಯ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನೋಡಿಕೊಳ್ಳಲಾಗುತ್ತದೆ. ತೋಳ್ಬಲ,ಹಣಬಲ , ಸ್ವಜಾತಿಯರ ಬೆಂಬಲ… ಒಂದೇ ಎರಡೇ ? ಈ ಅವ್ಯವಸ್ಥೆಯಲ್ಲಿ ಕೆಲವರು ಧರ್ಮಗುರುಗಳು ಸಹ ತೆರೆಮರೆಯಲ್ಲಿ ಪಾಲ್ಗೊಳ್ಳುತ್ತಾರೆ. ರಾಜಕೀಯದಲ್ಲಿ ಧರ್ಮವಿರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣವಿರಬಾರದು’ ಎಂದು ಹೇಳುತ್ತಲೇ ರಾಜಕಾರಣವನ್ನು ತೆರೆಮರೆಯಲ್ಲಿ ನಡೆಸುತ್ತಿರುವ ಜಗದ್ಗುರುಗಳನ್ನು ಅನುಮಾನ ಸಹಿತವಾಗಿ ನೋಡಬೇಕಾಗಿದೆ.
ಇದನ್ನೂ ಓದಿ: Opinion: ಪೆಟ್ರೋಲ್ ವಿತರಣಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಅವಶ್ಯ: ಡಾ ರವಿಕಿರಣ
ತತ್ವಜ್ಞಾನಿ ಸಾಕ್ರಟೀಸ್ ಹೇಳುವ ಒಂದು ಶ್ರೇಷ್ಟ್ರ ಉಕ್ತಿ, ‘ಪ್ರಶ್ನಿಸದೇ ಏನನ್ನು ನಂಬಬೇಡ’ ಎಂಬ ಅಸ್ತ್ರವನ್ನು ನಾವು ಉಪಯೋಗಿಸುವ ಕಾಲ ಸನ್ನಿಹಿತವಾಗಿದೆ, ಅಲ್ಲದೇ ಇದು ಸಾರ್ವಕಾಲಿಕ ಸತ್ಯ. ಈ ಅಸ್ತ್ರವನ್ನು ಚುನಾವಣೋತ್ತರ ದಿನಗಳಲ್ಲಿಯೂ ಬಳಸಿದರೆ ರಾಜ್ಯದ ಅನೇಕ ಸಮಸ್ಯೆಗಳು ಬಗೆಹರಿಯಬಹುದೇನೋ. ಬಹುತೇಕ ಭಾರತೀಯ ಮತದಾರರು ರಾಜಕಾರಣಿಗಳ ಸಮ್ಮೋಹನಗೊಳಿಸುವಂತಹ ಭಾಷಣಗಳನ್ನು ಕೇಳಿ, ಅವುಗಳ ಪ್ರಭಾವಕ್ಕೆ ಒಳಗಾಗಿ ತಮ್ಮ ಪವಿತ್ರ ಮತವನ್ನು ಅವಿವೇಕಿಗಳಿಗೆ ಹಾಕುತ್ತಾರೆ, ನಂತರ ಪಷ್ಟಪಕ್ಕೆ ಒಳಗಾಗುತ್ತಾರೆಂದು ಅಮೆರಿಕಾದ ಸಂಶೋಧನಾ ಪ್ರಬಂಧವೊಂದು ಹೇಳುತ್ತದೆ, ಇದು ಬಹುತೇಕ ಸತ್ಯ.
ತತ್ವಜ್ಞಾನಿಗಳು ರಾಜ್ಯವನ್ನಾಳಿದರೆ ಅಲ್ಲಿ ಸುಭಿಕ್ಷೆ ಇರುತ್ತದೆಂದು ಶ್ರೇಷ್ಠ ತತ್ವಜ್ಞಾನಿ ಪ್ಲೇಟೋನ ಆಶಯವಾಗಿತ್ತು. ಭಾರತದಲ್ಲಿ ಆಗುತ್ತಿರುವುದೇನು? ಈ ಹಿಂದೆ ನಡೆದ ಒಂದು ಚುನಾವಣೆಯಲ್ಲಿ ಶಿವರಾಮ ಕಾರಂತರನ್ನೇ ನಮ್ಮ ಮತದಾರರು ಸೋಲಿಸಿದರು.
‘ಓದು’ ಎಂಬುದು ಬಹಳಷ್ಟು ಮತದಾರರಲ್ಲಿ ಇಲ್ಲವಾಗಿದೆ, ಹಾಗೆಯೇ ಅವರಲ್ಲಿನ ವಿಮರ್ಶಾತ್ಮಕ ಬದುಕು ಕೂಡ. ಮತದಾರರ ಈ ಅಜ್ಞಾನವನ್ನೇ ಬಂಡವಾಳ ಮಾಡಿಕೊಂಡಿರುವ ರಾಜಕಾರಣಿಗಳು ಅದು-ಇದು ಅಂತ ಏನೆಲ್ಲವನ್ನು ಕೊಟ್ಟು, ಮುಂದೆ ಚುನಾವಣೆಯ ನಂತರವೂ ಇನ್ನೂ ಏನೆಲ್ಲ ಕೊಡುವ ಆಸೆಯನ್ನೂ ತೋರಿಸಿ, ಅಧಿಕಾರ, ಎಣಿಸಲಾಗದಷ್ಟು ಹಣ ಎಲ್ಲವನ್ನು ಅನುಭವಿಸಿ ದೇಶದ ಆರ್ಥಿಕ -ರಾಜಕೀಯ -ಸಾಮಾಜಿಕ ವ್ಯವಸ್ಥೆಯನ್ನು ಹಾಳುಗೆಡವುತ್ತಾರೆ.
ಅಂದಮಾತ್ರಕ್ಕೆ ಎಲ್ಲ ರಾಜಕಾರಣಿಗಳೂ, ಎಲ್ಲಾ ಜಗದ್ಗುರುಗಳೂ ಹಾಗಲ್ಲ. ಪಕ್ಷಾತೀತವಾಗಿ ನೋಡಿದರೆ ಲಾಲ್ ಬಹಾದ್ದೂರ್ ಶಾಸ್ತ್ರೀ, ವಾಜಪೇಯಿ, ನಿಜಲಿಂಗಪ್ಪ, ವೀರೇಂದ್ರಪಾಟೀಲ್, ಕೆಂಗಲ್ ಹನುಮಂತಯ್ಯ, ಗೋವಿಂದೇಗೌಡ, ಮುಂತಾದ ಶ್ರೇಷ್ಠ ರಾಜಕಾರಣಿಗಳನ್ನು ಈ ನಾಡು ಕಂಡಿದೆ. ಧರ್ಮಾತೀತವಾಗಿ ನೋಡಿದರೆ ಅನೇಕ ಧರ್ಮಗುರುಗಳು ರಾಜಕಾರಣಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಮುಂದುವರಿದ ರಾಷ್ಟ್ರಗಳಲ್ಲಿ ಮಾನವರ ಸಂತೋಷದಾಯಕ ಬದುಕನ್ನು ಅಳೆಯಲು ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್(HDI) ಎಂಬ ಮಾನದಂಡವೊಂದಿರುವುದು ನಮ್ಮ ದೇಶದ ಬಹುತೇಕ ಮತದಾರರಿಗೆ ಮತ್ತು ರಾಜಕಾರಣಿಗಳಿಗೆ ತಿಳಿದಿರುವುದಿಲ್ಲ, ಇದು ಪ್ರತಿವ್ಯಕ್ತಿಯ ಸಂತುಷ್ಟ ಜೀವನವನ್ನು ತಿಳಿಸುವ ಅಳತೆಗೋಲಾಗಿದೆ.
ಜಗತ್ತಿನ ಅತ್ಯಂತ ಸಂತುಷ್ಟ ರಾಷ್ಟ್ರಗಳಾದ, ಸ್ವೀಡನ್, ನಾರ್ವೆ, ಸ್ವಿಟ್ಜರ್ಲ್ಯಾಂಡ್ ನ ಜನತೆ ಹೇಳುವುದೇನೆಂದರೆ, ನಾವು ಇಲ್ಲಿ ಸಂತೋಷವಾಗಿದ್ದೇವೆ ಏಕೆಂದರೆ ಇಲ್ಲಿ ಅಪರಾಧಗಳ ಸಂಖ್ಯೆ ತುಂಬಾ ಕಡಿಮೆ, ಯುವಕರಿಕೆ ಸಾಕಷ್ಟು ಉದ್ಯೋಗಾವಕಾಶ, ಮಾದಕ ವಸ್ತುಗಳ ಸೇವನೆಗೆ ಕಠಿಣ ಶಿಕ್ಷೆ, ಮಹಿಳೆಯರಿಗೆ ಸೂಕ್ತ ರಕ್ಷಣೆ,ಕೃಷಿ ಭೂಮಿಯನ್ನು ಕೈಗಾರಿಕೆಗೆ ಬಿಟ್ಟುಕೊಡದಿರುವುದು ಇತ್ಯಾದಿ. ಈ ಟಾಪ್- ಟೆನ್, ಸಂತುಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ, ಭಾರತ ಮತ್ತು ಅಮೇರಿಕ ಕಟ್ಟಕಡೆಯ ಸ್ಥಾನದಲ್ಲಿವೆ, ಕಾರಣವಂತೂ ಸ್ಪಷ್ಟ.
ಮತದಾರ ನಿಮ್ಮಿಂದ ನಿರೀಕ್ಷಿಸುವುದು ಬಹಳಷ್ಟಿವೆಯಾದರೂ, ತ್ವರಿತವಾಗಿ ಈ ಸಮಸ್ಯೆಗಳತ್ತ ಗಮನ ನೀಡಿ, ಜನರ ಹೃದಯವನ್ನು ಗೆಲ್ಲಿರಿ. ಕೃಷಿ ಭೂಮಿಯನ್ನು ಕೈಗಾರಿಕೋದ್ಯಮಿಗಳಿಗೆ ನೀಡಿ ರೈತರನ್ನು ಬೀದಿಪಾಲು ಮಾಡಬೇಡಿ, ಅಪರಾಧಗಳನ್ನು ಪ್ರೋತ್ಸಾಹಿಸಬೇಡಿ, ಆಡಂಬರಕ್ಕಾಗಿ ನಮ್ಮ ತೆರಿಗೆ ಹಣವನ್ನು ಪೋಲು ಮಾಡಬೇಡಿ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಿ.
ಲೇಖಕ : ಡಾ. ಜಿ.ಎಂ.ತುಂಗೇಶ್ ಪ್ರಾಧ್ಯಾಪಕ
ಮಾನವಿಕ ಅಧ್ಯಯನ ವಿಭಾಗ
ಮಣಿಪಾಲ ತಾಂತ್ರಿಕ ಮಹಾ ವಿದ್ಯಾಲಯ ಮಾಹೆ,(ಪರಿಗಣಿತವಿಶ್ವವಿದ್ಯಾಲಯ),ಮಣಿಪಾಲ
Published On - 6:13 pm, Tue, 11 April 23