ಬೀದಿಬದಿ ನಿಂತು ತನ್ನದೇ ಕಾದಂಬರಿಯ 4,500 ಪ್ರತಿಗಳನ್ನು ಮಾರಾಟ ಮಾಡಿದ ಯುವ ಲೇಖಕ; ಮೊಯೀನ್ ವಿಎನ್ ಸ್ಫೂರ್ತಿ ಕಥೆ!

|

Updated on: Jun 17, 2023 | 6:07 PM

ಬೆಂಗಳೂರು ಮತ್ತು ಮುಂಬೈನ ಗದ್ದಲದ ಬೀದಿಗಳಲ್ಲಿ ತಮ್ಮದೇ ಸ್ವಂತ ಕಾದಂಬರಿಯನ್ನು ಮಾರಾಟ ಮಾಡುತ್ತಿರುವ ಬೆಂಗಳೂರಿನ ಯುವ ಲೇಖಕನ ಸ್ಫೂರ್ತಿ ಕಥೆ

ಬೀದಿಬದಿ ನಿಂತು ತನ್ನದೇ ಕಾದಂಬರಿಯ 4,500 ಪ್ರತಿಗಳನ್ನು ಮಾರಾಟ ಮಾಡಿದ ಯುವ ಲೇಖಕ; ಮೊಯೀನ್ ವಿಎನ್ ಸ್ಫೂರ್ತಿ ಕಥೆ!
ಮೊಯೀನ್ ವಿಎನ್
Follow us on

ಸಂಜೆಯ ಐದು ಗಂಟೆ. ಬೆಂಗಳೂರಿನ ಚರ್ಚ್​ಸ್ಟ್ರೀಟ್​ನಲ್ಲಿ ಒಂದು ಕಡೆ ಈ ಹುಡುಗ ನಿಂತುಕೊಂಡಿದ್ದಾನೆ. ಕೈಯಲ್ಲಿ ಒಂದು ನಾಮಫಲಕ ಬೇರೆ. ಆ ಮೂಲಕ ಜನರನ್ನು ಸೆಳೆವ ತವಕ. ಯಾವುದೋ ಪ್ರತಿಭಟನೆಯ ಭಾಗ ಈ ಹುಡುಗ ಎಂದುಕೊಳ್ಳಬೇಡಿ. ಆತನ ಕಣ್ಣಲ್ಲಿ ಬರೀ ಕನಸು. ಸಿಟ್ಟಿಲ್ಲ. ಯಾವ ಬೇಡಿಕೆಗಾಗಿ ಮಾಡುವ ಹೋರಾಟದ ಲವ ಲೇಶವೂ ಇಲ್ಲ.

ಈತ ಮತ್ಯಾರೂ ಅಲ್ಲ, ಮೊಯೀನ್ ವಿಎನ್ (Moyeen VN). ಬೆಂಗಳೂರು ಮೂಲದ ಯುವ ಲೇಖಕ. ನಾನು ಇದರ ಲೇಖಕ, ನನ್ನ ಮೊದಲ ಪುಸ್ತಕವನ್ನು ಕೊಂಡುಕೊಳ್ಳಿ-ಎಂದು ಬರೆದಿರುವ ಆ ಫಲಕ ಓದಿದರೆ ಜನರಿಗೆ ಕುತೂಹಲ ಹೆಚ್ಚಾಗಿ ಆತ ನಿಂತಲ್ಲಿ ಹೋಗಲೇ ಬೇಕು ಎನ್ನಿಸುತ್ತದೆ.

“ಎ ಥೌಸಂಡ್ ಇಯರ್ಸ್ ಆಫ್ ಪೇನ್” (A Thousand Years of Pain) ಎಂಬ ಶೀರ್ಷಿಕೆಯೊಂದಿಗೆ ಚೊಚ್ಚಲ ಕಾದಂಬರಿಯ ಪ್ರತಿಯೊಂದನ್ನು ಕೈಲ್ಲಿ ಹಿಡಿದು ನಿಂತುಕೊಂಡಿರುವ ಮೋಯಿನ್​, ಈ ರೀತಿಯ ಕರೆ ನೀಡಿ ವಿಭಿನ್ನ ರೀತಿಯಲ್ಲಿ ಮಾರಾಟದ ತಂತ್ರದ ಮೂಲಕ , ಯಶಸ್ವಿಯಾಗಿ 4500 ಪುಸ್ತಕ ಕಾಪಿಗಳನ್ನು ಜನರಿಗೆ ತಲುಪಿಸಿದ್ದಾರೆ. ಆ ಮೂಲಕ ದಾರಿಹೋಕರ ಗಮನ ಸೆಯುವುದರ ಜೊತೆಗೆ, ಮೆಚ್ಚುಗೆಯನ್ನು ಗಳಿಸಿದ್ದಾರೆ.

25 ವರ್ಷದ ಬೆಂಗಳೂರು ನಿವಾಸಿ ಮೊಯೀನ್, ಜೆಪಿ ನಗರದ ರಾಯಲ್ ಹೈ ಸ್ಕೂಲ್​ನಲ್ಲಿ ಪ್ರಾಥಮಿಕ ಶಿಕ್ಷಣ ಹಾಗು ಬಿಎನ್​ಎಂ ಕಾಲೇಜಿನಲ್ಲಿ ಪಿಯುಸಿಯನ್ನು ಮುಗಿಸಿದರು. ಸಣ್ಣ ವಯಸ್ಸಿನಿಂದಲೂ ಕಾದಂಬರಿ, ಕಥೆ-ಕಾವ್ಯಗಳನ್ನು ಓದುವುದರ ಮೇಲೆ ಅಸ್ತಕ್ತಿ ಬೆಳೆಸಿಕೊಂಡಿದ್ದ ಮೊಯೀನ್, ದಯಾನಂದ್ ಸಾಗರ್ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವಾಗ ತನ್ನದೇ ಸ್ವಂತ ಪುಸ್ತಕ ಬರೆಯಬೇಕೆಂಬ ಹಂಬಲ ಹೆಚ್ಚಾಗಿ, ಬಿಎ ಓದಲು ಮುಂದಾದರು. ಕೆಲವು ಸಮಯದ ನಂತರ ಬಿಎ ಗೂ ಗುಡ್ ಬೈ ಹೇಳಿ ‘ಎ ಥೌಸಂಡ್ ಇಯರ್ಸ್ ಆಫ್ ಪೇನ್’ ಪುಸ್ತಕ ಬರೆಯಲು ಪ್ರಾರಂಭಿಸಿದರು.

2021ರ ನವೆಂಬರ್ ತಿಂಗಳಿನಲ್ಲಿ ‘ಎ ಥೌಸಂಡ್ ಇಯರ್ಸ್ ಆಫ್ ಪೇನ್’ ಪುಸ್ತಕ ಮುದ್ರಣಕ್ಕೆ ಸಿದ್ದವಾಯಿತು, ಆದರೆ ತಮ್ಮ ಬಳಿ ಹಣವಿಲ್ಲದ ಕಾರಣ, ಹೆತ್ತವರ ಬಳಿ ಸಾಲ ಮಾಡಿ ಪುಸ್ತಕವನ್ನು ಮುದ್ರಿಸಿ, ಮೊಯೀನ್ ಪುಸ್ತಕವನ್ನು ಯಶಸ್ವಿಯಾಗಿ ಓದುಗರ ಕೈಗೊಪ್ಪಿಸಿದರು. ಹೆತ್ತವರು ಮೊಯೀನ್ ಅವರ ನಿರ್ಧಾರಕ್ಕೆ ಹೇಗೆ ಪ್ರತಿಕ್ರಿಯಿಸಿದರು ಎಂದು ಕೇಳಿದಾಗ, “ನನ್ನ ಕುಟುಂಬವು ನನ್ನನ್ನು ಎಂದು ಟೀಕಿಸಿಲ್ಲ, ಅದು ನಿಜವಾಗಿಯೂ ಒಳ್ಳೆಯ ಸಂಗತಿ. ಆದರೆ ನಾನು ಯಶಸ್ಸನ್ನು ಕಾಣಬೇಕು, ದೊಡ್ಡ ಸಾಧನೆ ಮಾಡಬೇಕು ಎಂದು ಅವರು ಬಯಸುತ್ತಾರೆ ಎಂಬುದು ನನಗೆ ತಿಳಿದಿದೆ” ಎಂದು ಹೇಳಿದರು.

ತಮ್ಮ ಹೆಚ್ಚಿನ ಸಮಯವನ್ನು ಪುಸ್ತಕಗಳು ಮತ್ತು ಬರವಣಿಗೆಯಲ್ಲಿ ಕಳೆಯುವ ಮೊಯೀನ್, ಕಥೆಗಾರರಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಆಕರ್ಷಕ ಸಂಗ್ರಹವನ್ನು ರಚಿಸಿದ್ದಾರೆ. ತಮ್ಮ ಕೆಲಸದ ಮಹತ್ವವನ್ನು ಉತ್ಸಾಹದಿಂದ ವಿವರಿಸುತ್ತಾ, ಮೊಯೀನ್ ಅವರು ಇದುವರೆಗೆ ಸುಮಾರು 4500 ಪ್ರತಿಗಳನ್ನು ಮಾರಾಟ ಮಾಡಲು ಸಹಾಯ ಮಾಡಿದ ಎಲ್ಲರಿಗು ಕೃತಜ್ಞರಾಗಿದ್ದಾರೆ. ಮುಂದೆ ‘ಪೆಂಗ್ವಿನ್’ನಂತಹ ಪ್ರಸಿದ್ಧ ಪುಸ್ತಕ ಪ್ರಕಾಶನಗಳು ತಮ್ಮ ಪುಸ್ತಕವನ್ನು ಗುರುತಿಸಿ ಅವರ ಪುಸ್ತಕಗಳನ್ನು ಮುದ್ರಿಸಬೇಕು ಎಂಬ ಮಹದಾಸೆಯನ್ನು ಹೊಂದಿದ್ದಾರೆ.

ಮೊದಲಿಗೆ 500 ಪ್ರತಿಗಳನ್ನು ಮುದ್ರಿಸಬೇಕು ಎಂದಾಗ ಕೆಲವು ಟೀಕೆಗಳನ್ನು ಸಹ ಈ ಯುವ ಲೇಖಕ ಎದುರಿಸಬೇಕಾಯಿತು. “50-100 ಪುಸ್ತಕವನ್ನು ಮೊದಲು ಮಾರಾಟ ಮಾಡು” ಎಂದು ತಮ್ಮ ಹಿತೈಷಿ ಒಬ್ಬರು ಹೇಳಿದ್ದನ್ನು ನೆನಪಿಸಿಕೊಳ್ಳುತ್ತಾ ಮೊಯೀನ್, “ರಿಸ್ಕ್ ತೆಗೆದುಕೊಳ್ಳುವಾಗ ದೊಡ್ಡದ್ದನ್ನೇ ತೆಗೆದುಕೊಳ್ಳಬೇಕು. ಒಂದಾ ಆ ಕಷ್ಟದ ಕಡಲಲ್ಲಿ ಈಜಿ ಜಯಭೇರಿ ಬಾರಿಸುತ್ತೇನೆ, ಇಲ್ಲವಾದರೆ ಕಷ್ಟಪಟ್ಟು ಸಾಯುತ್ತೇನೆ. ಹಾಗಂತ ರಿಸ್ಕ್ ತೆಗೆದುಕೊಳ್ಳಲು ಭಯ ಪಡುವುದಿಲ್ಲ”, ಎಂದು ಹೆಮ್ಮೆಯಿಂದ ಹೇಳಿದರು.

ಸಾಂಪ್ರದಾಯಿಕ ಪ್ರಕಾಶನ ಮಾರ್ಗಗಳನ್ನು ಅನುಸರಿಸುವ ಬದಲು ಬೀದಿಗಳಲ್ಲಿ ತಮ್ಮ ಪುಸ್ತಕವನ್ನು ಏಕೆ ಮಾರಾಟ ಮಾಡಲು ಆರಿಸಿಕೊಂಡಿರಿ ಎಂದು ಕೇಳಿದಾಗ, “ತನ್ನ ಪುಸ್ತಕವು ಅಮೆಜಾನ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದ್ದರೂ ಸಹ, ಫೇಮಸ್ ಆಗದೆ ಓದುಗರ ಗಮನ ಸೆಳೆಯುವುದು ಸವಾಲಿನ ಸಂಗತಿಯಾಗಿದೆ” ಎಂದು ಅವರು ಒಪ್ಪಿಕೊಳ್ಳುತ್ತಾರೆ. ಬೀದಿಗಿಳಿಯುವ ಮೂಲಕ, ಮೊಯೀನ್ ಓದುಗರೊಂದಿಗೆ ವೈಯಕ್ತಿಕ ಮಟ್ಟದಲ್ಲಿ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಅವರ ಉತ್ಸಾಹ ಮತ್ತು ಅವರ ಕಥೆಗಳ ಸಾರವನ್ನು ಜನರಿಗೆ ಮುಟ್ಟಿಸುವ ಮೂಲಕ, ಜನರ ಮನಸ್ಸನ್ನು ಗೆದ್ದಿದ್ದಾರೆ.

‘ಎ ಥೌಸಂಡ್ ಇಯರ್ಸ್ ಆಫ್ ಪೇನ್’ ಪುಸ್ತಕದ ಕುರಿತು ಮಾಹಿತಿ:

“ಎ ಥೌಸಂಡ್ ಇಯರ್ಸ್ ಆಫ್ ಪೇನ್” ಒಂದು ಕಾಲ್ಪನಿಕ ಕಾದಂಬರಿಯಾಗಿದ್ದು, ಓದುಗರನ್ನು ಕಿನ್‌ಶುಕ್ ಸಾಮ್ರಾಜ್ಯಕ್ಕೆ ಪ್ರಯಾಣ ಕರೆದುಕೊಂಡು ಹೋಗುತ್ತದೆ.

ಕಿನ್‌ಶುಕ್ ಸಾಮ್ರಾಜ್ಯವು ಘೋರ ಯುದ್ಧದಲ್ಲಿ ಸಿಲುಕಿಕೊಂಡಾಗ, ರಾಜನ ಸುರಕ್ಷತೆಯ ಜವಾಬ್ದಾರಿ ಹೊತ್ತ ಯುವಕ ಅಥರ್ವನಿಗೆ ಪ್ರತಿ ರಾತ್ರಿ ಒಂದೇ ಕನಸು ಬೀಳಲು ಪ್ರಾರಂಭವಾಗುತ್ತದೆ, ಅದರಲ್ಲಿ ಯಾವಾಗಲೂ ಯಾರೋ ಅವನನ್ನು ಕಾಡಿಗೆ ಕರೆಯುವ ಧ್ವನಿ ಕೇಳಿಸುತ್ತದೆ.

ಒಂದು ಕಾಲ್ಪನಿಕ ಕಾಡಿನಲ್ಲಿ ಸುಪ್ತವಾಗಿರುವ ಪೌರಾಣಿಕ ರಹಸ್ಯದೊಂದಿಗೆ ರಾಜರ ಕಾಲದಲ್ಲಿ ನಡೆಯುವ ಕಥೆಯೇ ಎ ಥೌಸಂಡ್ ಇಯರ್ಸ್ ಆಫ್ ಪೇನ್. ಸಾವಿರ ವರ್ಷ ಹಿಂದೆಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುವ ಈ ಕಥೆಯಲ್ಲಿ ಏನಾಗುತ್ತದೆ ಎಂದು ತಿಳಿಯಲು ಇಂದೇ ಅಮೆಜಾನ್​ನಿಂದ ಪುಸ್ತಕವನ್ನು ಖರೀದಿಸಿ.

ಅಮೆಜಾನ್ ನೇರ ಲಿಂಕ್

ಮೊಯೀನ್ ಅವರ ಪ್ರಕಟಣೆಯ ಹಾದಿಯು ಸುಲಭವಿರಲಿಲ್ಲ. ದೇವರ ದಯೆಯಿಂದ 2 ವರ್ಷಗಳಲ್ಲಿ 5000 ಪುಸ್ತಕಗಳನ್ನು ಮೊಯೀನ್ ಮುದ್ರಣಗೊಳಿಸಿ ಅದರಲ್ಲಿ 4500 ಪುಸ್ತಕಗಳನ್ನು ಜನರಿಗೆ ತಲುಪಿಸಿದ್ದಾರೆ. ಮುಂಬೈ ಹಾಗು ಬೆಂಗಳೂರು ನಗರಗಳಲ್ಲಿ ಟ್ರೈನ್, ಮೆಟ್ರೋ, ಬೀದಿಬದಿ ಹೀಗೆ ಹತ್ತು ಹಲವು ಕಡೆ ತಮ್ಮ ಪುಸ್ತಕವನ್ನು ತಾವೇ ಮಾರಾಟ ಮಾಡಿ ಜನರ ಗಮನ ಸೆಳೆದಿದ್ದಾರೆ. ಈ ಪುಸ್ತಕದ ಎರಡನೇ ಭಾಗವನ್ನು ಯಾವಾಗ ಬಿಡುಗಡೆ ಮಾಡ್ತೀರಾ ಎಂದು ಕೇಳಿದ್ದಕ್ಕೆ, “ನಾನು ಯಶಸ್ವಿಯಾಗಿ 10,000 ಪುಸ್ತಕ ಮಾರಾಟ ಮಾಡಿದ ನಂತರ” ಎಂದು ನಗುತ್ತಾ ಹೇಳುತ್ತಾರೆ.

ಕನ್ನಡ ಸಾಹಿತ್ಯ ಸಿರಿಯನ್ನು ನೋಡುತ್ತಿದ್ದರೆ, ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಪುಸ್ತಕ ಬರೆಯುವ ಹೊಸ ಲೇಖಕರು ಬೆರಳೆಣಿಕೆಯಷ್ಟು ಎಂದರೆ ತಪ್ಪಾಗಲಾರದು. ಮುಂದಿನ ದಿನಗಳಲ್ಲಿ ಮೊಯೀನ್ ಕನ್ನಡದಲ್ಲೂ ಬರೆಯುವ ಆಸೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಆದರೆ, ಇದೀಗ ಮೊಯೀನ್ ಪುಸ್ತಕ ಪ್ರಕಾಶಕರನ್ನು ಹುಡುಕುತ್ತಿದ್ದಾರೆ. ಆಸಕ್ತರು ಮೊಯೀನ್ ಅವರನ್ನು ಈ ಮೂಲಕ ಸಂಪರ್ಕಿಸಬಹುದು,

  • ಮೊಬೈಲ್ ಸಂಖ್ಯೆ: 7892012857
  • ಇನ್ಸ್​ಟಾಗ್ರಾಮ್​ ಐಡಿ: @moyeen_vn
  • ಇಮೇಲ್: Moyeenvn@gmail.com

ಮೊಯೀನ್ ಅವರ ಕಥೆ ಅದೆಷ್ಟೋ ಚಿಗುರೊಡೆಯುತ್ತಿರುವ ಲೇಖಕರು ಮತ್ತು ಕನಸುಗಾರರಿಗೆ ಸ್ಫೂರ್ತಿಯಾಗಬೇಕು. ಮನಸಿದ್ದರೆ ಮಾರ್ಗ ಎಂಬುದಕ್ಕೆ ಸಾಕ್ಷಿಯಾಗಿ ಮೊಯೀನ್ ನಿಮ್ಮ ಮುಂದೆ ನಿಂತಿದ್ದಾರೆ. ಕನ್ನಡದ ಹೆಸರಾಂತ ಲೇಖಕ ವಸುದೇಂದ್ರ ಅವರು ಕೂಡ ಮೊಯೀನ್ ಕುರಿತು ಸಾಮಾಜಿಕ ಜಾಲತಾಣ ಒಂದರಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ; ಅಂಬಾನಿ, ಟಾಟಾ, ಅದಾನಿ, ಅಂಬಾನಿ ಅವರನ್ನೂ ಮೀರಿಸಿದ ವೀರ್ಜಿ ವೋರಾ!

ನೀವು ಎಂದಾದರೂ ಚರ್ಚ್ ಸ್ಟ್ರೀಟ್‌ಗೆ ಭೇಟಿ ನೀಡಿದಾಗ, ಮೊಯೀನ್ ಅವರನ್ನು ಕಂಡರೆ, ಹಲೋ ಹೇಳಲು ಮರೆಯದಿರಿ. ಬೀದಿಯಲ್ಲಿ ನಿಲ್ಲುವುದು, ಪುಸ್ತಕಗಳನ್ನು ಮಾರಾಟ ಮಾಡುವುದು ಸುಲಭದ ಕೆಲಸವಲ್ಲ, ಆದರೆ ಮೊಯೀನ್ ಮುಖದಲ್ಲಿನ ನಗು ಮತ್ತು ಅವರ ಕಥೆ ಹೇಳುವ ಉತ್ಸಾಹ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದೆ.