ಇಸ್ರೋದ ಆರ್‌ಎಲ್‌ವಿ-ಟಿಡಿ ಕಾರ್ಯಾಚರಣೆ: ಭವಿಷ್ಯದ ಬಾಹ್ಯಾಕಾಶ ಪ್ರವಾಸಕ್ಕೆ ಮುನ್ನುಡಿಯೇ?

|

Updated on: Apr 02, 2023 | 9:03 PM

ಬೆಂಗಳೂರಿನಿಂದ ಅಂದಾಜು 220 ಕಿಲೋಮೀಟರ್ ದೂರದಲ್ಲಿರುವ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಎಪ್ರಿಲ್ 2ರಂದು ಆರ್‌ಎಲ್‌ವಿ, ಆರ್‌ಎಲ್‌ವಿ ಎಲ್ಇಎಕ್ಸ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

ಇಸ್ರೋದ ಆರ್‌ಎಲ್‌ವಿ-ಟಿಡಿ ಕಾರ್ಯಾಚರಣೆ: ಭವಿಷ್ಯದ ಬಾಹ್ಯಾಕಾಶ ಪ್ರವಾಸಕ್ಕೆ ಮುನ್ನುಡಿಯೇ?
ಇಸ್ರೋದ ಆರ್‌ಎಲ್‌ವಿ-ಟಿಡಿ ಕಾರ್ಯಾಚರಣೆ ಯಶಸ್ವಿ
Follow us on

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಹಾಗೂ ಭಾರತೀಯ ವಾಯುಪಡೆ – ಎಂಸಿಸಿ ಜಂಟಿಯಾಗಿ ರಿಯೂಸೆಬಲ್ ಲಾಂಚ್ ವೆಹಿಕಲ್ (RLV) ಅಟಾನಮಸ್ ಲ್ಯಾಂಡಿಂಗ್ ಮಿಷನ್ (RLV LEX) ಕಾರ್ಯಾಚರಣೆಯನ್ನು ಬೆಂಗಳೂರಿನಿಂದ ಅಂದಾಜು 220 ಕಿಲೋಮೀಟರ್ ದೂರದಲ್ಲಿರುವ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಇಂದು (ಎಪ್ರಿಲ್ 2) ಬೆಳಗ್ಗೆ ಯಶಸ್ವಿಯಾಗಿ ನೆರವೇರಿಸಿದವು. ಇಸ್ರೋ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಸಂಸ್ಥೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದರು. ಅವರು ಇಂತಹ ಒಂದು ಪ್ರವಾಸಕ್ಕೆ ಪ್ರತಿಯೊಬ್ಬ ಪ್ರವಾಸಿಗೆ ಆರು ಕೋಟಿ ವೆಚ್ಚ ತಗಲುತ್ತದೆ ಎಂದಿದ್ದಾರೆ.

ಇಸ್ರೋ ಈ ಕಾರ್ಯಾಚರಣೆಗೆ ಆರ್‌ಎಲ್‌ವಿ-ಟಿಡಿಯ ಸಣ್ಣ ಆವೃತ್ತಿಯನ್ನು ಬಳಸಿಕೊಂಡಿತ್ತು. ಆದರೆ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಬಳಸುವ ನೈಜ ಆವೃತ್ತಿ ಇದರ 1.6 ಪಟ್ಟು ದೊಡ್ಡದಾಗಿರುತ್ತದೆ. ಆರ್‌ಎಲ್‌ವಿ-ಟಿಡಿಯಲ್ಲಿ ದೇಹ, ನೋಸ್ ಕ್ಯಾಪ್, ರೆಕ್ಕೆಗಳು, ಹಾಗೂ ಬಾಲ ಸೇರಿದಂತೆ ಹಲವು ಭಾಗಗಳಿದ್ದು, ಎಲೆವಾನ್ಸ್ ಹಾಗೂ ರಡ್ಡರ್ ಎಂದು ಕರೆಯಲಾಗುವ ನಿಯಂತ್ರಣ ವ್ಯವಸ್ಥೆಗಳಿವೆ.

ಎಚ್ಎಸ್9 ಎಂಬ ಹೆಸರಿನ ಸಾಲಿಡ್ ಬೂಸ್ಟರ್ ಅನ್ನು ಬಳಸಿ, ಇದರ ವೇಗ ಮ್ಯಾಕ್-5 ಅಥವಾ ಶಬ್ದದ ವೇಗಕ್ಕಿಂತ ಐದು ಪಟ್ಟು ಹೆಚ್ಚು, ಅಂದರೆ ಪ್ರತಿ ಗಂಟೆಗೆ 6,000 ಕಿಲೋಮೀಟರ್ ವೇಗದಲ್ಲಿ ಚಲಿಸುವಂತೆ ಮಾಡಲಾಗುತ್ತದೆ. (ಗಾಳಿಯ ಉಷ್ಣತೆ 20 ಡಿಗ್ರಿ ಇದ್ದಾಗ ಶಬ್ದದ ವೇಗ ಪ್ರತಿ ಗಂಟೆಗೆ 1,230 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ). ಆರ್‌ಎಲ್‌ವಿ-ಟಿಡಿಯ ಅಭಿವೃದ್ಧಿಗೆ ಆಧುನಿಕ ಉಪಕರಣಗಳಾದ ಅಲಾಯ್ಸ್, ಕಾಂಪೋಸಿಟ್‌ಗಳು, ಹಾಗೂ ಇನ್ಸುಲೇಶನ್ ಉಪಕರಣಗಳು, ಕುಶಲ ಕಾರ್ಮಿಕರು, ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ಅಗತ್ಯವಿದೆ.

ಸ್ವಾಯತ್ತ ಮಿಡ್ ಏರ್ ರಿಲೀಸ್

ಇಸ್ರೋದ ಪ್ರಕಾರ, ರೆಕ್ಕೆಯನ್ನು ಹೊಂದಿದ್ದ ಒಂದು ವಸ್ತುವನ್ನು ಹೆಲಿಕಾಪ್ಟರ್ ಮೂಲಕ 4.5 ಕಿಲೋಮೀಟರ್ ಎತ್ತರಕ್ಕೆ ಒಯ್ದು ಅಲ್ಲಿಂದ ಬಿಡುಗಡೆಗೊಳಿಸಿ, ಅದು ಸ್ವಾಯತ್ತವಾಗಿ ಚಿತ್ರದುರ್ಗದ ರಕ್ಷಣಾ ವಾಯುನೆಲೆಯ ರನ್‌ವೇನಲ್ಲಿ ಇದೇ ಮೊದಲ ಬಾರಿಗೆ ಇಳಿಯುವಂತೆ ಮಾಡಲಾಯಿತು. ಒಂದು ಬಾಹ್ಯಾಕಾಶ ವಿಮಾನದಂತಹ ಆರ್‌ಎಲ್‌ವಿ ಅತ್ಯಂತ ಕಡಿಮೆ ಲಿಫ್ಟ್ ಟು ಡ್ರ್ಯಾಗ್ ಅನುಪಾತ ಹೊಂದಿದ್ದು, ಹೈ ಗ್ಲೈಡ್ ಕೋನದ ಅಗತ್ಯವಿದ್ದು, ಗಂಟೆಗೆ 350 ಕಿಲೋಮೀಟರ್ ವೇಗದಲ್ಲಿ ಭೂಸ್ಪರ್ಶ ನಡೆಸುತ್ತದೆ.

ಬೆಳಗ್ಗೆ 7:10ಕ್ಕೆ, ಆರ್‌ಎಲ್‌ವಿಯನ್ನು ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಮೂಲಕ ಅಂಡರ್‌ಸ್ಲಂಗ್ ಲೋಡ್ ರೂಪದಲ್ಲಿ 4.5 ಕಿಲೋಮೀಟರ್ ಎತ್ತರಕ್ಕೆ ಒಯ್ಯಲಾಯಿತು. ಆರ್‌ಎಲ್‌ವಿಯ ಯೋಜನಾ ನಿರ್ವಹಣಾ ಕಂಪ್ಯೂಟರ್‌ಗೆ ಬೇಕಾದ ನಿಯತಾಂಕಗಳನ್ನು ಪೂರೈಸಿದ ಬಳಿಕ ಕಂಪ್ಯೂಟರ್ ಆದೇಶದಂತೆ ಅದನ್ನು 4.6 ಕಿಲೋಮೀಟರ್‌ಗಳ ಡೌನ್ ರೇಂಜ್ ಮೂಲಕ ಬಿಡುಗಡೆಗೊಳಿಸಲಾಯಿತು. ಆ ಬಿಡುಗಡೆಯೂ ಸ್ವಾಯತ್ತವಾಗಿದ್ದು, ಸ್ಥಾನ, ವೇಗ, ಎತ್ತರ, ಬಾಡಿ ರೇಟ್ ಸೇರಿದಂತೆ 10 ನಿಯತಾಂಕಗಳನ್ನು ಒಳಗೊಂಡಿತ್ತು. ಬಳಿಕ ಆರ್‌ಎಲ್‌ವಿ ಸ್ವತಂತ್ರವಾಗಿ ಭೂಮಿಯೆಡೆಗೆ ಚಲಿಸಿ ಭೂಸ್ಪರ್ಶ ನಡೆಸಿತು. ಇದಕ್ಕಾಗಿ ಅಂತರ್ಗತ ನ್ಯಾವಿಗೇಶನ್, ಮಾರ್ಗದರ್ಶನ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ಬಳಸಿಕೊಳ್ಳಲಾಯಿತು. ಇದು ಏರ್ ಸ್ಟ್ರಿಪ್​ನಲ್ಲಿ ಬೆಳಗ್ಗೆ 7:40ಕ್ಕೆ ಸ್ವಾಯತ್ತ ಭೂಸ್ಪರ್ಶ ನಡೆಸಿತು.

ಇಸ್ರೋದ ಆರ್‌ಎಲ್‌ವಿ-ಟಿಡಿ ಕಾರ್ಯಾಚರಣೆ ಯಶಸ್ವಿ

ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ (VSSC) ನಿರ್ದೇಶಕ ಎಸ್ ಉನ್ನಿಕೃಷ್ಣನ್ ನಾಯರ್ ಅವರ ಪ್ರಕಾರ, ಕಾರ್ಯಾಚರಣೆ ಅಂದುಕೊಂಡ ರೀತಿಯಲ್ಲೇ ನಡೆದು, ಎಲ್ಲ ನಿಯತಾಂಕಗಳನ್ನೂ ಪೂರೈಸಿತ್ತು. ಈ ಬಾಹ್ಯಾಕಾಶ ವಾಹನ ಬಾಹ್ಯಾಕಾಶ ರಿ-ಎಂಟ್ರಿ ವಾಹನದ ರೀತಿಯಲ್ಲೇ ಅತ್ಯಂತ ವೇಗವಾಗಿ, ನಿಖರವಾಗಿ, ಭೂಸ್ಪರ್ಶ ನಡೆಸಿತು. ಇಸ್ರೋದ ಆರ್‌ಎಲ್‌ವಿ-ಎಲ್ಇಎಕ್ಸ್ ನಿಖರ ನ್ಯಾವಿಗೇಶನ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್, ಸ್ಯೂಡೋಲೈಟ್ ವ್ಯವಸ್ಥೆ, ಕೆ-ಬ್ಯಾಂಡ್ ರೇಡಾರ್ ಅಲ್ಟಿಮೀಟರ್, ದೇಶೀಯ ನಿರ್ಮಾಣದ ಲ್ಯಾಂಡಿಂಗ್ ಗೇರ್, ಏರೋಫಾಯಿಲ್ ಹನಿಕಾಂಬ್ ಫಿನ್ಸ್ ಹಾಗೂ ಬ್ರೇಕ್ ಪ್ಯಾರಾಶೂಟ್ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ಇಸ್ರೋ ಸ್ಪರ್ಧೆ

ಮುಂದಿನ ದಿನಗಳಲ್ಲಿ ನಾವು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ಸ್ಪರ್ಧಿಸುವುದಾಗಿ ಇಸ್ರೋ ಅಧ್ಯಕ್ಷರು ಶನಿವಾರ ಘೋಷಿಸಿದರು. ಇಂತಹ ಒಂದು ಪ್ರವಾಸಕ್ಕೆ ಪ್ರತಿಯೊಬ್ಬ ಪ್ರವಾಸಿಗೆ ಆರು ಕೋಟಿ ವೆಚ್ಚ ತಗುಲಲಿದೆ. ಇಸ್ರೋದ ತಂಡ ಈ ಬಾಹ್ಯಾಕಾಶ ವಾಹನವನ್ನು ಖಾಸಗಿ ಸಂಸ್ಥೆಗಳು ಬಾಹ್ಯಾಕಾಶ ಪ್ರವಾಸ ಆಯೋಜಿಸುವ ಸಲುವಾಗಿ ನಿರ್ಮಿಸಿದೆ.

ಬಾಹ್ಯಾಕಾಶ ಪ್ರವಾಸೋದ್ಯಮ ಎಂದರೇನು?

ಬಾಹ್ಯಾಕಾಶ ಪ್ರವಾಸೋದ್ಯಮ ಎಂದರೆ ಮನೋರಂಜನಾ ಉದ್ದೇಶಕ್ಕಾಗಿ ವಾಣಿಜ್ಯಿಕ ಬಾಹ್ಯಾಕಾಶ ಪ್ರವಾಸ ಕೈಗೊಳ್ಳುವುದು. ಇದರಲ್ಲಿ ಬಾಹ್ಯಾಕಾಶ ಪ್ರವಾಸ ಕೈಗೊಳ್ಳಲು ಟಿಕೆಟ್ ಖರೀದಿಸುವುದನ್ನು ಒಳಗೊಂಡಿರುತ್ತದೆ. ಈ ಪ್ರವಾಸದಲ್ಲಿ ಭೂಮಿಯ ವಾತಾವರಣದಿಂದ ಸಾಕಷ್ಟು ಮೇಲಕ್ಕೆ ತೆರಳಿ, ತೂಕಾರಾಹಿತ್ಯ ಸ್ಥಿತಿಯ ಅನುಭವವನ್ನು ಪಡೆಯಲಾಗುತ್ತದೆ. ಈ ತೂಕಾರಾಹಿತ್ಯ ಸ್ಥಿತಿಯಲ್ಲಿ ಪ್ರಯೋಗಗಳನ್ನು ನಡೆಸಬಹುದಾಗಿದೆ.

ಬಾಹ್ಯಾಕಾಶ ಪ್ರವಾಸೋದ್ಯಮ ಇನ್ನೂ ಆರಂಭಿಕ ಹಂತದಲ್ಲಿದ್ದು, ಗಗನಯಾನಿಗಳು, ಸಂಶೋಧಕರು, ಸೇರಿದಂತೆ, ಕೇವಲ ಕೆಲವು ಜನರಿಗಷ್ಟೇ ಈ ಪ್ರವಾಸ ನಡೆಸುವ ಅವಕಾಶ ಲಭಿಸಿದೆ. ಆದರೆ ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದು, ಖಾಸಗಿ ಸಂಸ್ಥೆಗಳಾದ ಸ್ಪೇಸ್ ಎಕ್ಸ್, ಬ್ಲೂ ಒರಿಜಿನ್, ವರ್ಜಿನ್ ಗ್ಯಾಲಾಕ್ಟಿಕ್, ಮತ್ತಿತರ ಸಂಸ್ಥೆಗಳು ಬಂದ ನಂತರ ಸಾರ್ವಜನಿಕರಲ್ಲೂ ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ಆಸಕ್ತಿ ಬೆಳೆಯುತ್ತಿದೆ.

ಬಾಹ್ಯಾಕಾಶ ಪ್ರವಾಸೋದ್ಯಮ ಇಂದಿಗೂ ಅಪಾರ ವೆಚ್ಚದಾಯಕ ಮತ್ತು ಕೆಲವರಿಗೆ ಮಾತ್ರವೇ ಲಭ್ಯವಾಗಿದ್ದರೂ, ಬಾಹ್ಯಾಕಾಶ ಸಂಶೋಧನೆಯ ಕುರಿತು ನಾವು ಆಲೋಚಿಸುವ ವಿಧಾನದಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲದಾಗಿದೆ. ಅದರೊಡನೆ, ಬಾಹ್ಯಾಕಾಶ ಉದ್ಯಮಕ್ಕೂ ಆದಾಯದ ಮೂಲವಾಗಲಿದೆ.

ಬಾಹ್ಯಾಕಾಶ ಪ್ರವಾಸದ ಕುರಿತು ಮಾತನಾಡುತ್ತಾ ಇಸ್ರೋ ಅಧ್ಯಕ್ಷರು, ಬ್ಲೂ ಒರಿಜಿನ್ ಅಥವಾ ವರ್ಜಿನ್ ಗ್ಯಾಲಕ್ಟಿಕ್‌ನಲ್ಲಿ ಈ ಪ್ರವಾಸದ ಟಿಕೆಟ್ ವೆಚ್ಚ ಆರು ಕೋಟಿಯಾಗಿರುತ್ತದೆ ಎಂದಿದ್ದರು. ಒಂದು ವೇಳೆ ಇಸ್ರೋದ ವಾಹನವನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುವಂತಾದರೆ ವಾಹನದ ಮರುಬಳಕೆಯ ಸಾಧ್ಯತೆಯಿಂದ ವೆಚ್ಚ ಅಷ್ಟರಲ್ಲೇ ಇರಲಿದೆ.

ಆರಂಭದಲ್ಲಿ ಈ ಯೋಜನೆಯನ್ನು ಸಂಪೂರ್ಣವಾಗಿ ಮರುಬಳಕೆ ಮಾಡಬಲ್ಲ, ಕಕ್ಷೆಗೆ ತೆರಳಬಲ್ಲ, ಎರಡು ಹಂತಗಳ ಬಾಹ್ಯಾಕಾಶ ವಾಹನದ ನಿರ್ಮಾಣಕ್ಕೆ ಪೂರ್ವಭಾವಿಯಾಗಿ, ವಿವಿಧ ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸುವ ಸಲುವಾಗಿ ಆರಂಭಿಸಲಾಯಿತು. 2016ರ ಮೇ 23ರಂದು ಇಸ್ರೋ ತನ್ನ ಮೊತ್ತಮೊದಲ ಆರ್‌ಎಲ್‌ವಿ-ಟಿಡಿ ಎಚ್ಇಎಕ್ಸ್-01 ಯೋಜನೆಯನ್ನು ಜಾರಿಗೆ ತಂದಿತು. ಅದು ಮರು ಆಗಮಿಸುವ ಬಾಹ್ಯಾಕಾಶ ವಾಹನದ ವಿನ್ಯಾಸ ಮತ್ತು ಪರೀಕ್ಷೆಯ ಪ್ರಮುಖ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿತು. ಇದೊಂದು ಸಬ್ ಆರ್ಬಿಟಲ್ ಯೋಜನೆಯಾಗಿದ್ದು, ನೀರಿನ ಮೇಲೆ ಇಳಿಸುವ ಉದ್ದೇಶದಿಂದ ನಿರ್ಮಿಸಲಾಗಿತ್ತು.

 

 

 

 

 

 

ಲೇಖನ: ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Published On - 8:58 pm, Sun, 2 April 23