
ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಛಂಗನೆ ಬಿಟ್ಟ ಬಾಣದಂತೆ ಮೇಲೆಕ್ಕೆ ನೆಗೆಯುವ ಜನರು ಒಂದ್ಕಡೆ. ಮತ್ತೊಂದ್ಕಡೆ ಜಿಪ್ ಲೈನ್ನಲ್ಲಿ ಬಂಧಿಯಾಗಿ ಮುಗಿಲೆತ್ತರದಲ್ಲಿ ಶರವೇಗದಲ್ಲಿ ಚಲಿಸುವ ಸಾಹಸಿಗಳು. ಒಂದಾ ಎರಡ, ಎಷ್ಟೊಂದು ಸಾಹಸಗಳು ಗೊತ್ತಾ. ಇವೆಲ್ಲಾ ನೋಡಲು ಸಿಗುವುದು ಮಡಿಕೇರಿಯ ವಿಶ್ವ ಪ್ರಸಿದ್ಧ ವೀವ್ ಪಾಯಿಂಟ್ ರಾಜಾಸೀಟ್ನಲ್ಲಿ.

ಹೌದು ರಾಜಾಸೀಟ್ನ ಸುಂದರ ಉದ್ಯಾನವನಕ್ಕೆ ಮನಸೋಲದವರಿಲ್ಲ. ಆಕರ್ಷಕ ಹೂ ರಾಶಿಗಳ ಮಧ್ಯೆ ಹೆಜ್ಜೆ ಹಾಕುತ್ತಾ, ಮಂಜಿನ ರಾಶಿಯನ್ನ ಹೊದ್ದು ಮಲಗುವ ಬೆಟ್ಟಗುಡ್ಡಗಳನ್ನ ಎಂಜಾಯ್ ಮಾಡುತ್ತಾ ಸುತ್ತವುದೇ ಒಂದು ಆನಂದ. ಇಂತಹ ಪರಿಸರದಲ್ಲೇ ಇದೀಗ ಜಿಲ್ಲಾಡಳಿತ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಡ್ವೆಂಚರಸ್ ಆಕ್ಟಿವಿಟಿಗಳನ್ನ ಏರ್ಪಾಡು ಮಾಡಲಾಗಿದೆ.

ಒಟ್ಟು ನಾಲ್ಕು ಬಗೆಯ ಸಾಹಸಗಳನ್ನ ಇಲ್ಲಿ ಪ್ರವಾಸಿಗರಿಗೆ ಪರಿಚಯಿಸಲಾಗಿದೆ. ಪುಟ್ಟ ಮಕ್ಕಳಿಗಾಗಿ ಕಿಡ್ಸ್ ಝೋನ್ ಆಕ್ಟಿವಿಟಿ, ಹಾಗೆಯೇ ಟ್ರೆಕ್ಕಿಂಗ್ ಅನುಭವ ನೀಡುವ ಲೋ ರೋಪ್ ಆಕ್ಟಿವಿಟಿ ಒಂದೆಡೆಯಾದ್ರೆ, ಗುಂಡಿಗೆ ಗಟ್ಟಿ ಇರುವವರಿಗಾಗಿಯೇ ರಾಕೆಟ್ ಇಜೆಕ್ಟರ್ ಸಿದ್ಧಪಡಿಸಲಾಗಿದೆ.

ಇಲಾಸ್ಟಿಕ್ ಮಾದರಿಯ ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಂಡ ಜನರನ್ನ ಚಂಗನೆ ಮೇಲಕ್ಕೆ ಚಿಮ್ಮಿಸಲಾಗುತ್ತದೆ. ಈ ಸಂದರ್ಭ ಜೀವವೇ ಬಾಯಿಗೆ ಬಂದಂತಾಗುತ್ತದೆ. ಆದ್ರೆ ಇದು ಸಖತ್ ಥ್ರಿಲ್ ನೀಡುತ್ತದೆ. ಹಾಗಾಗಿಯೇ ಈ ಸಾಹಸಕ್ಕೆ ಜನರು ಮುಗಿ ಬೀಳುತ್ತಾರೆ.

ಇನ್ನು ಜಿಪ್ ಲೈನ್ ಅಂತೂ ಅಕ್ಷರಶಃ ಆಕಾಶದಲ್ಲೇ ಹಾರಾಡಿದ ಅನುಭವ ನೀಡುತ್ತದೆ. ಸುಮಾರು 380 ಮೀಟರ್ ದೂರ ಶರವೇಗದಲ್ಲಿ ಬಾನಾಡಿಯಂತೆ ಇಲ್ಲಿ ಚಲಿಸಬಹುದು. ಜಿಪ್ ಲೈನ್ ಅನ್ನ ವಿವಿಧ ವಯೋಮಾನದವರೆಗೆ ಎಂಜಾಯ್ ಮಾಡಬಹುದು.

ಇನ್ನು ಇದುವರೆಗೆ ರಾಜಾಸೀಟ್ನಲ್ಲಿ ಬರುವ ಪ್ರವಾಸಿಗರು ಕೇವಲ ಪ್ರಕೃತಿ ಸೌಂದರ್ಯ ಮಾತ್ರ ವೀಕ್ಷಿಸಬಹುದಿತ್ತು. ಆದ್ರೆ, ಇದೀಗ ಪ್ರಕೃತಿಯ ಮಧ್ಯದಲ್ಲೇ ಇಂತಹ ಆಕ್ಟಿವಿಟೀಸ್ ಎಂಜಾಯ್ ಮಾಡುತ್ತಾ ಇನ್ನಿಲ್ಲದ ಥ್ರಿಲ್ ಪಡೆಯುತ್ತಿದ್ದಾರೆ.

ಹಾಗೆ ನೋಡಿದ್ರೆ, ಇದು ಕೇವಲ ಯುವ ಜನರಿಗೆ ಸೀಮಿತವಲ್ಲ. ಮೂರು ವರ್ಷದಿಂದ 80 ವರ್ಷದವರೆಗೂ ಇಲ್ಲಿ ಸಾಹಸ ಚಟುವಟೆಕೆಗಳನ್ನ ಎಂಜಾಯ್ ಮಾಡಬಹುದು. ಹಾಗಾಗಿ ಮಡಿಕೇರಿ ಪ್ರವಾಸ ಬರುವವರಿಗೆ ಇದು ಬೋನಸ್ ಆಗಿ ದೊರಕಿದಂತಾಗಿದೆ. ಜೊತೆಗೆ ಭದ್ರತಾ ವ್ಯವಸ್ಥೆಯೊಂದಿಗೇ ಈ ಸಾಹಸ ಚಟುವಟಿಕೆ ನಡೆಯುತ್ತದೆ ಎನ್ನುವುದು ವಿಶೇಷ.

ಒಟ್ಟಾರೆ, ಕೊಡಗು ಪ್ರವಾಸ ಅನ್ನುವುದೇ ಒಂದು ಅಡ್ವೆಂಚರಸ್. ಅಂತಹದರಲ್ಲಿ ಇಂತಹ ಕೃತಕ ಸಾಹಸ ಚಟುವಟಿಕೆಗಳು ಪ್ರವಾಸಿಗರಿಗೆ ಇನ್ನಷ್ಟು ಥ್ರಿಲ್ ನೀಡುವುದರ ಜೊತೆಗೆ ಅವರ ಪ್ರವಾಸವನ್ನ ಮತ್ತಷ್ಟು ಸ್ಮರಣೀಯವಾಗಿಸುತ್ತಿದೆ.