
ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಸ್ಫೋಟಕ ದಾಂಡಿಗ ಅಭಿಷೇಕ್ ಶರ್ಮಾ (Abhishek Sharma) ಅವರ ಆರ್ಭಟ ಮುಂದುವರೆದಿದೆ. ಈ ಬಾರಿ ಆರ್ಭಟದೊಂದಿಗೆ ಅಭಿಷೇಕ್ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಅದು ಸಹ ಧಗ್ಗರು ದಾಂಡಿಗರ ಹಳೆಯ ದಾಖಲೆಗಳನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ. (PC: BCCI)

ಬೆಲ್ಫಾಸ್ಟ್ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಈ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಬಾರಿ 20 ಕ್ಕಿಂತ ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ ವಿಶ್ವ ದಾಖಲೆಯನ್ನು ಅಭಿಷೇಕ್ ತಮ್ಮದಾಗಿಸಿಕೊಂಡಿದ್ದಾರೆ. (PC: BCCI)

ಇದಕ್ಕೂ ಮುನ್ನ ಇಂತಹದೊಂದು ದಾಖಲೆಯನ್ನು ಹಲವು ದಾಂಡಿಗರು ಜಂಟಿಯಾಗಿ ಹಂಚಿಕೊಂಡಿದ್ದರು. ಭಾರತದ ಯುವರಾಜ್ ಸಿಂಗ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಮತ್ತು ನ್ಯೂಝಿಲೆಂಡ್‌ನ ಕಾಲಿನ್ ಮನ್ರೋ ಅವರು ತಲಾ 3 ಬಾರಿ ಐಸಿಸಿ ಪೂರ್ಣಾವಧಿ ಸದಸ್ಯ ರಾಷ್ಟ್ರಗಳ ವಿರುದ್ಧ 20 ಕ್ಕಿಂತ ಕಡಿಮೆ ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದರು. (PC: ICC)

ಇದೀಗ 25 ವರ್ಷದ ಅಭಿಷೇಕ್ ಶರ್ಮಾ ಈ ದಾಖಲೆಗಳನ್ನು ಉಡೀಸ್ ಮಾಡಿದ್ದಾರೆ. ಈವರೆಗೆ ಆಡಿರುವ 46 ಟಿ20 ಇನಿಂಗ್ಸ್ಗಳಲ್ಲಿ ಅಭಿಷೇಕ್ 5 ಬಾರಿ 20 ಕ್ಕಿಂತ ಕಡಿಮೆ ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದ್ದಾರೆ. ಈ ಮೂಲಕ ಐಸಿಸಿ ಪೂರ್ಣಾವಧಿ ಸದಸ್ಯ ರಾಷ್ಟ್ರಗಳ ವಿರುದ್ಧ ಇಪ್ಪತ್ತಕ್ಕಿಂತ ಕಡಿಮೆ ಎಸೆತಗಳಲ್ಲಿ ಅತೀ ಹೆಚ್ಚು ಬಾರಿ ಅರ್ಧಶತಕ ಬಾರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: BCCI)

ಅಂದಹಾಗೆ ಅಭಿಷೇಕ್ ಶರ್ಮಾ ಅವರಿಗೆ ಇಂತಹ ಬಿರುಗಾಳಿ ಬ್ಯಾಟಿಂಗ್ ಹೊಸದೇನಲ್ಲ. ಇದೇ ವರ್ಷ ನಡೆದ ಐಪಿಎಲ್ 2026 ಟೂರ್ನಿಯಲ್ಲೂ ಸನ್‌ರೈಸರ್ಸ್ ಹೈದರಾಬಾದ್ ಪರ ಅಬ್ಬರಿಸಿದ್ದರು. ಅಲ್ಲದೆ ಐಪಿಎಲ್ನಲ್ಲಿ 5 ಬಾರಿ 20ಕ್ಕಿಂತ ಕಡಿಮೆ ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದರು. ಇದೀಗ ಈ ದಾಖಲೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪುನರಾವರ್ತಿಸಿದ್ದಾರೆ. (PC: IPL)