
2024 ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಸುದ್ದಿ ಮಾಡಿದ್ದ ಅಭಿಷೇಕ್ ಶರ್ಮಾ ತಮ್ಮ ಹೊಡಿಬಡಿ ಆಟದ ಮೂಲಕವೇ ವಿಶ್ವಾದ್ಯಂತ ಮನ್ನಣೆ ಪಡೆದಿದ್ದಾರೆ. ಇದರ ಫಲವಾಗಿ ಅವರಿಗೆ ಭಾರತ ಟಿ20 ತಂಡದಲ್ಲೂ ಆರಂಭಿಕನ ಸ್ಥಾನವೂ ಸಿಕ್ಕಿದೆ. ಭಾರತದಲ್ಲಿ ಮಾತ್ರವಲ್ಲದೆ ಅಭಿಷೇಕ್ ದಕ್ಷಿಣ ಆಫ್ರಿಕಾ, ಯುಎಇ ಮತ್ತು ಆಸ್ಟ್ರೇಲಿಯಾದಲ್ಲೂ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಈಗಾಗಲೇ ಸಿಡಿಲಬ್ಬರದ ಶತಕ ಮತ್ತು ವೇಗವಾಗಿ 1,000 ಟಿ20 ಅಂತರರಾಷ್ಟ್ರೀಯ ರನ್ ಪೂರೈಸಿದ ದಾಖಲೆಗಳನ್ನು ನಿರ್ಮಿಸಿರುವ ಅಭಿಷೇಕ್ ಈಗ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. 2025 ರಲ್ಲಿ ಟಿ20 ಸ್ವರೂಪದಲ್ಲಿ 100 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅಭಿಷೇಕ್ ಹೊಸ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.

ಡಿಸೆಂಬರ್ 6 ರಂದು ಸರ್ವಿಸಸ್ ವಿರುದ್ಧದ ಸೈಯದ್ ಮುಷ್ತಾಕ್ ಟ್ರೋಫಿ ಪಂದ್ಯದಲ್ಲಿ ಪಂಜಾಬ್ ಪರ ಆರಂಭಿಕನಾಗಿ ಆಡಿದ ಅಭಿಷೇಕ್ ತಮ್ಮ ಇನ್ನಿಂಗ್ಸ್ನಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಇದರೊಂದಿಗೆ, 2025 ರಲ್ಲಿ ಕೇವಲ 36 ಟಿ20 ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ 101 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಈ ವಿಷಯದಲ್ಲಿ ಅಭಿಷೇಕ್ ತಮ್ಮದೇ ಆದ ದಾಖಲೆಯನ್ನು ಮುರಿದಿದ್ದಾರೆ. 2024 ರಲ್ಲಿ ಅವರು ಟಿ20 ಕ್ರಿಕೆಟ್‌ನಲ್ಲಿ ಒಟ್ಟು 87 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ 2022 ರಲ್ಲಿ 85 ಸಿಕ್ಸರ್‌ಗಳನ್ನು ಬಾರಿಸಿದ್ದರು.

ವಿಶ್ವ ದಾಖಲೆಯ ವಿಷಯದಲ್ಲಿ, ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2024 ರಲ್ಲಿ ಪೂರನ್ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 170 ಸಿಕ್ಸರ್‌ಗಳನ್ನು ಬಾರಿಸಿದ್ದರು. ಏತನ್ಮಧ್ಯೆ, ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಸ್ ಗೇಲ್ ಒಂದು ವರ್ಷದಲ್ಲಿ 100 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಸಾಧನೆಯನ್ನು 6 ಬಾರಿ ಮಾಡಿದ್ದಾರೆ.

ಅಭಿಷೇಕ್ ಅವರ ಸಿಕ್ಸರ್‌ಗಳ ಬಗ್ಗೆ ಹೇಳುವುದಾದರೆ, ಈ ವರ್ಷ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 47 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅಭಿಷೇಕ್ ಕೇವಲ 17 ಇನ್ನಿಂಗ್ಸ್‌ಗಳಲ್ಲಿ 47 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದಲ್ಲದೆ, ಐಪಿಎಲ್ 2025 ರಲ್ಲಿ, ಅವರು 14 ಇನ್ನಿಂಗ್ಸ್‌ಗಳಲ್ಲಿ 28 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಹೀಗಾಗಿ ಅಂತರರಾಷ್ಟ್ರೀಯ ಟಿ20 ಮತ್ತು ಐಪಿಎಲ್‌ನಲ್ಲಿ 75 ಸಿಕ್ಸರ್‌ಗಳನ್ನು ಬಾರಿಸಿದ್ದ ಅಭಿಷೇಕ್, ಇದೀಗ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 26 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.