ಭಾರತ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಿದೆ. ಉಭಯ ತಂಡಗಳ ನಡುವಿನ ಸರಣಿಯ ಮೊದಲ ಪಂದ್ಯ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬೌಲಿಂಗ್ ಮಾಡುತ್ತಿದೆ. ಇದರೊಂದಿಗೆ ಭಾರತ ತಂಡದಲ್ಲಿ ಯಾರಿಗೆಲ್ಲ ಅವಕಾಶ ಸಿಕ್ಕಿದೆ ಎಂಬುದು ಕೂಡ ಸ್ಪಷ್ಟವಾಗಿದೆ.
ಈ ಸರಣಿಯೊಂದಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತೊಮ್ಮೆ ಮೈದಾನಕ್ಕೆ ಮರಳಿದ್ದಾರೆ. ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಏಕದನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಸಮಯದಲ್ಲಿ, ಒಬ್ಬ ಆಟಗಾರ ಸುಮಾರು 5 ವರ್ಷಗಳ ನಂತರ ಟೀಂ ಇಂಡಿಯಾ ಪರ ಏಕದಿನ ಪಂದ್ಯವನ್ನು ಆಡುವ ಅವಕಾಶ ಪಡೆದಿದ್ದಾನೆ.
ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಹಲವು ಅಚ್ಚರಿಯ ಆಯ್ಕೆಗಳನ್ನು ಮಾಡಲಾಗಿದೆ. ಅದರಂತೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಬದಲು ಕೆಎಲ್ ರಾಹುಲ್ಗೆ ಅವಕಾಶ ನೀಡಲಾಗಿದೆ. ಅದೇ ಸಮಯದಲ್ಲಿ, ಆಲ್ ರೌಂಡರ್ ಶಿವಂ ದುಬೆ ಕೂಡ ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೂಲಕ ಶಿವಂ ದುಬೆ ಸುಮಾರು 5 ವರ್ಷಗಳ ನಂತರ ಟೀಂ ಇಂಡಿಯಾ ಪರ ಏಕದಿನ ಪಂದ್ಯವನ್ನು ಆಡುತ್ತಿದ್ದಾರೆ. ಇದಕ್ಕೂ ಮೊದಲು, ಅವರು ಡಿಸೆಂಬರ್ 2019 ರಲ್ಲಿ ಟೀಮ್ ಇಂಡಿಯಾ ಪರ ತಮ್ಮ ಏಕೈಕ ಏಕದಿನ ಪಂದ್ಯವನ್ನು ಆಡಿದ್ದರು. ಆ ಪಂದ್ಯದಲ್ಲಿ ಅವರು ಗಳಿಸಿದ್ದು ಕೇವಲ 9 ರನ್. ಇದಾದ ಬಳಿಕ ಅವರಿಗೆ ಮತ್ತೆ ಏಕದಿನ ತಂಡದಲ್ಲಿ ಅವಕಾಶ ಸಿಗಲಿಲ್ಲ.
ಇತ್ತೀಚಿನ ದಿನಗಳಲ್ಲಿ ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಪರ ಶಿವಂ ದುಬೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು 2024 ರ ಟಿ20 ವಿಶ್ವಕಪ್‌ನ ಚಾಂಪಿಯನ್ ತಂಡದ ಭಾಗವಾಗಿದ್ದರು. ನಿರಂತರವಾಗಿ ಆಡುವ ಅವಕಾಶವೂ ಸಿಕ್ಕಿತು. ಈ ಆಟದಿಂದಾಗಿ ಇದೀಗ ಏಕದಿನ ತಂಡದಲ್ಲೂ ಪುನರಾಗಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 7 ವರ್ಷಗಳ ನಂತರ ಶ್ರೀಲಂಕಾದಲ್ಲಿ ಏಕದಿನ ಸರಣಿಯನ್ನು ಆಡುತ್ತಿದ್ದಾರೆ. ಈ ಹಿಂದೆ ಸೆಪ್ಟೆಂಬರ್ 2017 ರಲ್ಲಿ, ಈ ಇಬ್ಬರೂ ಆಟಗಾರರು ಶ್ರೀಲಂಕಾದಲ್ಲಿ ಏಕದಿನ ಸರಣಿಯನ್ನು ಆಡಿದ್ದರು.
ಭಾರತದ ತಂಡ: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಶ್ದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್.