
ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ದೇಶಿ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸರ್ಫರಾಜ್ ಖಾನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಹರಿಯಾಣ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಸರ್ಫರಾಜ್ ಈ ಪಂದ್ಯದಲ್ಲಿ ಕೇವಲ 25 ಎಸೆತಗಳನ್ನು ಎದುರಿಸಿ 256 ರ ಸ್ಟ್ರೈಕ್ ರೇಟ್ನಲ್ಲಿ 64 ರನ್ ಬಾರಿಸಿದರು.

ಐಪಿಎಲ್ 2026 ರ ಮಿನಿ ಹರಾಜು ಸಮೀಪಿಸುತ್ತಿರುವಾಗ ಸರ್ಫರಾಜ್ ಅವರ ಈ ಪ್ರದರ್ಶನ ಅವರಿಗೆ ಐಪಿಎಲ್‌ನಲ್ಲಿ ಮರುಜನ್ಮ ನೀಡುವ ಅವಕಾಶಕ್ಕೆ ಪುಷ್ಠಿ ನೀಡಿದೆ. ಹರಿಯಾಣ ವಿರುದ್ಧದ ಪಂದ್ಯದಲ್ಲಿ ಸರ್ಫರಾಜ್ ಖಾನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಜಿಂಕ್ಯ ರಹಾನೆ ಔಟಾದ ನಂತರ ಕ್ರೀಸ್‌ಗೆ ಬಂದ ಸರ್ಫರಾಜ್ ಹರಿಯಾಣ ಬೌಲರ್‌ಗಳ ಮೇಲೆ ದಾಳಿ ಮಾಡಿದರು.

ಸರ್ಫರಾಜ್ ಅವರ ಅಬ್ಬರದಿಂದಾಗಿ ಮುಂಬೈ ತಂಡ ಕೇವಲ ಆರು ಓವರ್‌ಗಳಲ್ಲಿ 100 ರನ್‌ಗಳ ಗಡಿ ದಾಟಿತು. ಪವರ್‌ಪ್ಲೇನಲ್ಲಿಯೇ ತನ್ನ ಪವರ್ ತೋರಿದ ಸರ್ಫರಾಜ್ ಕೇವಲ 18 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅಂತಿಮವಾಗಿ 64 ರನ್‌ಗಳ ಇನ್ನಿಂಗ್ಸ್ ಆಡಿದ ಸರ್ಫರಾಜ್ ಒಂಬತ್ತು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಅಂದರೆ, ಅವರು ಕೇವಲ ಸಿಕ್ಸರ್ ಮತ್ತು ಬೌಂಡರಿಗಳಿಂದಲೇ 54 ರನ್ ಕಲೆಹಾಕಿದರು.

ಐಪಿಎಲ್ 2026 ರ ಹರಾಜಿಗೂ ಮೊದಲು ಸರ್ಫರಾಜ್ ಖಾನ್ ಈ ಇನ್ನಿಂಗ್ಸ್ ಆಡಿರುವ ಕಾರಣ ಐಪಿಎಲ್ ತಂಡಗಳು ಸಹ ಸರ್ಫರಾಜ್ ಖರೀದಿಗೆ ಮನಸ್ಸು ಮಾಡುವ ಸಾಧ್ಯತೆಯಿದೆ. 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿಗೆ ಪ್ರವೇಶಿಸಿರುವ ಸರ್ಫರಾಜ್ ಖಾನ್ರನ್ನು ಯಾವುದಾದರೊಂದು ಫ್ರಾಂಚೈಸಿ ಖರೀದಿಸಬಹುದು ಎಂಬ ಭರವಸೆ ಅಭಿಮಾನಿಗಳಿಗಿದೆ.

ವಾಸ್ತವವಾಗಿ ಕಳೆದ ನಾಲ್ಕು ವರ್ಷಗಳಿಂದ ಸರ್ಫರಾಜ್ ಖಾನ್ ಐಪಿಎಲ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ. ಐಪಿಎಲ್ 2021 ರಿಂದ ಅವರಿಗೆ ಲೀಗ್‌ನಲ್ಲಿ ಆಡಲು ಅವಕಾಶ ಸಿಕ್ಕಿಲ್ಲ. ಸರ್ಫರಾಜ್ ಇದುವರೆಗೆ 40 ಐಪಿಎಲ್ ಪಂದ್ಯಗಳಲ್ಲಿ 23.21 ಸರಾಸರಿಯಲ್ಲಿ 441 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಅರ್ಧಶತಕವೂ ಸೇರಿದೆ.

ಇನ್ನು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದ ಬಗ್ಗೆ ಹೇಳುವುದಾದರೆ, ಮುಂಬೈ ತಂಡವು ಹರಿಯಾಣವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಹರಿಯಾಣ 20 ಓವರ್‌ಗಳಲ್ಲಿ 234 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಮುಂಬೈ ಕೇವಲ 17.3 ಓವರ್‌ಗಳಲ್ಲಿ ಈ ಬೃಹತ್ ಗುರಿಯನ್ನು ಬೆನ್ನಟ್ಟಿತು. ಹರಿಯಾಣ ವಿರುದ್ಧ ತಂಡವೊಂದು ಇಷ್ಟು ದೊಡ್ಡ ಸ್ಕೋರ್ ಅನ್ನು ಬೆನ್ನಟ್ಟಿದ್ದು ಇದೇ ಮೊದಲು. ಸರ್ಫರಾಜ್ ಜೊತೆಗೆ, ಯಶಸ್ವಿ ಜೈಸ್ವಾಲ್ ಕೂಡ ಈ ಪಂದ್ಯದಲ್ಲಿ 50 ಎಸೆತಗಳಲ್ಲಿ 101 ರನ್‌ಗಳ ಇನ್ನಿಂಗ್ಸ್ ಆಡಿದರು.