
Ashes 2025: ಟೆಸ್ಟ್ ಪಂದ್ಯವೊಂದರ ದಿನದಾಟವೊಂದರಲ್ಲಿ ಎಷ್ಟು ಕ್ಯಾಚ್ ಕೈಚೆಲ್ಲಬಹುದು? ಅದು ಸಹ ಆಸ್ಟ್ರೇಯಾದಂತಹ ಬಲಿಷ್ಠ ತಂಡಗಳ ವಿರುದ್ಧ..? ಒಂದು... ಎರಡು... ಮೂರು... ನಾಲ್ಕು..? ಇಂಗ್ಲೆಂಡ್ ತಂಡವು ಬರೋಬ್ಬರಿ 5 ಕ್ಯಾಚ್ಗಳನ್ನು ಕೈಚೆಲ್ಲಿಕೊಂಡಿದೆ.

ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 334 ರನ್ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯನ್ನರಿಗೆ ಇಂಗ್ಲೆಂಡ್ 5 ಜೀವದಾನಗಳನ್ನು ನೀಡಿ ಅಚ್ಚರಿ ಮೂಡಿಸಿದ್ದಾರೆ.

ಆಸ್ಟ್ರೇಲಿಯಾ ತಂಡದ ಮೊದಲ ಇನಿಂಗ್ಸ್ ಆರಂಭದಲ್ಲೇ ಇಂಗ್ಲೆಂಡ್ ವಿಕೆಟ್ ಕೀಪರ್ ಜೇಮಿ ಸ್ಮಿತ್, ಟ್ರಾವಿಸ್ ಹೆಡ್ ಅವರ ಕ್ಯಾಚ್ ಕೈಚೆಲ್ಲಿದ್ದರು. ಇದಾದ ಬಳಿಕ ಅಲೆಕ್ಸ್ ಕ್ಯಾರಿ ನೀಡಿದ ಸುಲಭ ಕ್ಯಾಚ್ ಹಿಡಿಯುವಲ್ಲಿ ಬೆನ್ ಡಕೆಟ್ ವಿಫಲರಾದರು. ಆ ನಂತರ ಜೋಶ್ ಇಂಗ್ಲಿಸ್ ಅವರ ಕ್ಯಾಚ್ ಸಹ ಡಕೆಟ್ ಕೈ ಬಿಟ್ಟರು.

ಮೊದಲ ಜೀವದಾನದ ಬಳಿಕ ಅಲೆಕ್ಸ್ ಕ್ಯಾರಿ ಜೋ ರೂಟ್ಗೆ ಕ್ಯಾಚ್ ನೀಡಿದ್ದರು. ಆದರೆ ಚೆಂಡನ್ನು ಹಿಡಿಯುವಲ್ಲಿ ರೂಟ್ ಕೂಡ ವಿಫಲರಾದರು.ಇನ್ನು ಮೈಕೆಲ್ ನೇಸರ್ ನೀಡಿದ ಸುಲಭ ಕ್ಯಾಚ್ ಅನ್ನು ಬ್ರೈಡನ್ ಕಾರ್ಸ್ ಕೈಚೆಲ್ಲಿದರು. ಈ ಮೂಲಕ ಇಂಗ್ಲೆಂಡ್ ತಂಡವು ಒಂದೇ ದಿನದಲ್ಲಿ ಕ್ಯಾಚ್ಗಳನ್ನು ಕೈಚೆಲ್ಲಿ ಆಸ್ಟ್ರೇಲಿಯಾದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

ಅಂದಹಾಗೆ ಟೆಸ್ಟ್ ಕ್ರಿಕೆಟ್ನಲ್ಲಿ ಒಂದೇ ದಿನ ಅತ್ಯಧಿಕ ಕ್ಯಾಚ್ ಕೈ ಚೆಲ್ಲಿದ ಅತ್ಯಂತ ಹೀನಾಯ ದಾಖಲೆ ಟೀಮ್ ಇಂಡಿಯಾದ ಹೆಸರಿನಲ್ಲಿದೆ. 1985 ರಲ್ಲಿ ಕೊಲಂಬೊದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತೀಯ ಫೀಲ್ಡರ್ಗಳು ಬರೋಬ್ಬರಿ 7 ಕ್ಯಾಚ್ಗಳನ್ನು ಕೈಚೆಲ್ಲಿದ್ದರು. ಇದೀಗ 5 ಕ್ಯಾಚ್ಗಳನ್ನು ಕೈ ಬಿಡುವ ಮೂಲಕ ಇಂಗ್ಲೆಂಡ್ ತಂಡವು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದೆ.