
ಟಿ20 ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ತಂಡವು 222 ಪಂದ್ಯಗಳನ್ನಾಡಿದೆ. ಈ ಇನ್ನೂರ ಇಪ್ಪೆರಡು ಮ್ಯಾಚ್ಗಳಲ್ಲಿ ಆಸೀಸ್ ಪಡೆ 122 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಸೋತಿರುವುದು ಕೇವಲ 90 ಪಂದ್ಯಗಳಲ್ಲಿ ಮಾತ್ರ. ಈ ತೊಂಬತ್ತು ಪಂದ್ಯಗಳಲ್ಲಿ ಅತ್ಯಂತ ಹೀನಾಯವಾಗಿ ಸೋತಿರುವುದು ಪಾಕಿಸ್ತಾನ್ ವಿರುದ್ಧ.

ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಿತು. ಈ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ 208 ರನ್ಗಳ ಕಠಿಣ ಗುರಿ ನೀಡಿದ್ದರು.

ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಮೊಹಮ್ಮದ್ ನವಾಝ್ ಅವರ ಸ್ಪಿನ್ ದಾಳಿಗೆ ತತ್ತರಿಸಿದೆ. ಪರಿಣಾಮ 16.5 ಓವರ್ಗಳಲ್ಲಿ ಕೇವಲ 96 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡವು ಬರೋಬ್ಬರಿ 111 ರನ್ಗಳಿಂದ ಸೋಲೊಪ್ಪಿಕೊಂಡಿದೆ.

ವಿಶೇಷ ಎಂದರೆ ಇದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಆಸ್ಟ್ರೇಲಿಯಾ ತಂಡದ ಅತ್ಯಂತ ಹೀನಾಯ ಸೋಲು. ಅಂದರೆ ಈವರೆಗೆ ಟಿ20 ಕ್ರಿಕೆಟ್ನಲ್ಲಿ ಆಸೀಸ್ ಪಡೆ 100 ಕ್ಕಿಂತ ಹೆಚ್ಚಿನ ರನ್ಗಳ ಅಂತರದಿಂದ ಪರಾಜಯಗೊಂಡಿರಲಿಲ್ಲ. ಇದಕ್ಕೂ ಮುನ್ನ 2005 ರಲ್ಲಿ ಇಂಗ್ಲೆಂಡ್ 100 ರನ್ಗಳಿಂದ ಸೋತಿದ್ದು ಹೀನಾಯ ಸೋಲಾಗಿತ್ತು.

ಆದರೆ ಈ ಬಾರಿ ಪಾಕಿಸ್ತಾನ್ ಪಡೆ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಕಾಡೆ ಮಲಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಬರೋಬ್ಬರಿ 111 ರನ್ಗಳ ಅಂತರದಿಂದ ಸೋಲುಣಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅತ್ತ ನೂರಕ್ಕಿಂತ ಹೆಚ್ಚಿನ ರನ್ಗಳ ಅಂತರದ ಸೋಲು ಕಾಣದೇ ಟಿ20 ಕ್ರಿಕೆಟ್ನಲ್ಲಿ ಪಾರುಪತ್ಯ ಮೆರೆದಿದ್ದ ಆಸ್ಟ್ರೇಲಿಯಾ ತಂಡವು ಹೀನಾಯ ಸೋಲಿನೊಂದಿಗೆ ಭಾರೀ ಮುಖಭಂಗ ಅನುಭವಿಸಿದೆ.