
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಬಾಬರ್ ಆಝಂ ಪ್ರಸ್ತುತ ತಮ್ಮ ದೇಶದಲ್ಲಿ ನಡೆಯುತ್ತಿರುವ ಟಿ20 ಲೀಗ್‌ನಲ್ಲಿ ಆಡುತ್ತಿದ್ದಾರೆ. ಈ ಲೀಗ್‌ನಲ್ಲಿ ಪೇಶಾವರ್ ಝಲ್ಮಿ ತಂಡದ ಪರ ಆಡುತ್ತಿರುವ ಬಾಬರ್, ಕರಾಚಿಯಲ್ಲಿ ನಡೆದ ಪಿಎಸ್‌ಎಲ್ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರ ಜೊತೆಗೆ ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಪಾಕಿಸ್ತಾನದ ನಂಬರ್ 1, ಏಷ್ಯಾದ ನಂಬರ್ 2 ಮತ್ತು ವಿಶ್ವದ ನಂಬರ್ 3 ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ವಾಸ್ತವವಾಗಿ ಪಿಎಸ್ಎಲ್ ಲೀಗ್‌ನಲ್ಲಿ ಪೇಶಾವರ್ ಝಲ್ಮಿ ತಂಡದ ನಾಯಕನಾಗಿರುವ ಬಾಬರ್ ಆಝಂ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧದ ಪಂದ್ಯದಲ್ಲಿ 51 ಎಸೆತಗಳಲ್ಲಿ 71 ರನ್ಗಳ ಇನ್ನಿಂಗ್ಸ್ ಆಡಿದರು. ಇದು ಟಿ20 ಕ್ರಿಕೆಟ್‌ನಲ್ಲಿ ಬಾಬರ್ ಆಝಂ ಅವರ 100 ನೇ ಅರ್ಧಶತಕವಾಗಿತ್ತು. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಪಾಕಿಸ್ತಾನಿ ಆಟಗಾರ ಎಂಬ ದಾಖಲೆ ಬರೆದ ಬಾಬರ್, 354 ಟಿ20 ಪಂದ್ಯಗಳ 341 ಇನ್ನಿಂಗ್ಸ್‌ಗಳಲ್ಲಿ 100 ಅರ್ಧಶತಕಗಳನ್ನು ಗಳಿಸಿದ್ದಾರೆ.

ಬಾಬರ್ ಆಝಂಗಿಂತ ಮೊದಲು ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 100 ಅರ್ಧಶತಕಗಳ ಗಡಿ ದಾಟಿದ್ದರು. ವಿರಾಟ್ ಪ್ರಸ್ತುತ 419 ಟಿ20 ಪಂದ್ಯಗಳಲ್ಲಿ 402 ಇನ್ನಿಂಗ್ಸ್‌ಗಳಲ್ಲಿ 107 ಅರ್ಧಶತಕಗಳನ್ನು ಗಳಿಸಿದ್ದಾರೆ. ಹೀಗಾಗಿ ಟಿ20 ಕ್ರಿಕೆಟ್‌ನಲ್ಲಿ 100 ಅರ್ಧಶತಕ ಬಾರಿಸಿದ ಏಷ್ಯಾದ ಮೊದಲ ಬ್ಯಾಟರ್ ಎಂಬ ದಾಖಲೆ ಕೊಹ್ಲಿ ಪಾಲಾಗಿದ್ದರೆ, ಇದೀಗ ಟಿ20 ಕ್ರಿಕೆಟ್‌ನಲ್ಲಿ 100 ಅರ್ಧಶತಕಗಳನ್ನು ಬಾರಿಸಿದ ಏಷ್ಯಾದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಬಾಬರ್ ಆಝಂ ಪಾತ್ರರಾಗಿದ್ದಾರೆ.

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 116 ಅರ್ಧಶತಕಗಳೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ವಾರ್ನರ್ 436 ಪಂದ್ಯಗಳಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ, 435 ಇನ್ನಿಂಗ್ಸ್‌ಗಳಲ್ಲಿ 116 ಅರ್ಧಶತಕ ಬಾರಿಸಿದ್ದಾರೆ. ಇದೀಗ ಬಾಬರ್ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಉಳಿದಂತೆ ಈ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಮತ್ತು ವಿರಾಟ್ ಕೊಹ್ಲಿ ಮೊದಲೆರಡು ಸ್ಥಾನಗಳಲಿದ್ದಾರೆ.

ತಮ್ಮ ಟಿ20 ವೃತ್ತಿಜೀವನದಲ್ಲಿ 100 ಅರ್ಧಶತಕಗಳನ್ನು ಬಾರಿಸಿರುವ ಬಾಬರ್ ಆಝಂ, ಇದರಲ್ಲಿ 39 ಅರ್ಧಶತಕಗಳನ್ನು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬಾರಿಸಿದ್ದರೆ, ಪಿಎಸ್ಎಲ್‌ನಲ್ಲಿ 38, ಬಿಬಿಎಲ್‌ನಲ್ಲಿ ಎರಡು, ಬಿಪಿಎಲ್‌ನಲ್ಲಿ ಮೂರು ಮತ್ತು ಎಲ್‌ಪಿಎಲ್‌ನಲ್ಲಿ ಒಂದು ಅರ್ಧಶತಕಗಳನ್ನು ಸಿಡಿಸಿದ್ದಾರೆ.