
ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 207 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೇವಲ 96 ರನ್‌ಗಳಿಗೆ ಆಲೌಟ್ ಆಯಿತು. ಪಾಕ್ ತಂಡದ ಈ ಗೆಲುವಿನಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಆಝಂ ಬಾರಿಸಿದ ಅರ್ಧಶತಕ ಪ್ರಮುಖ ಪಾತ್ರವಹಿಸಿತು.

ಕಳಪೆ ಫಾರ್ಮ್ ಮತ್ತು ಕಳಪೆ ಸ್ಟ್ರೈಕ್ ರೇಟ್‌ನಿಂದ ಬಳಲುತ್ತಿದ್ದ ಬಾಬರ್ ಈ ಪಂದ್ಯದಲ್ಲಿ ಅರ್ಧಶತಕ ಬಾರಿಸುವಲ್ಲಿ ಯಶಸ್ವಿಯಾದರು. ಈ ಇನ್ನಿಂಗ್ಸ್‌ನೊಂದಿಗೆ ಬಾಬರ್, ಇಷ್ಟು ದಿನ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ಆಸೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಬಾಬರ್ 36 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 50 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು. ಇದಕ್ಕೂ ಮೊದಲು, ಬಾಬರ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕೇವಲ 2 ಮತ್ತು 24 ರನ್‌ಗಳನ್ನು ಮಾತ್ರ ಗಳಿಸಿದ್ದರು, ಆದರೆ ಮೂರನೇ ಪಂದ್ಯದಲ್ಲಿ ಮತ್ತೆ ತಮ್ಮ ಫಾರ್ಮ್ ಕಂಡುಕೊಳ್ಳುವಲ್ಲಿ ಬಾಬರ್ ಯಶಸ್ವಿಯಾಗಿದ್ದಾರೆ.

ಇದು ಬಾಬರ್ ಅವರ ಟಿ20ಐ ವೃತ್ತಿಜೀವನದ 39 ನೇ ಅರ್ಧಶತಕವಾಗಿದ್ದು, ಈ ಅರ್ಧಶತಕದ ಮೂಲಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಬಾಬರ್ ಈಗ ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಪಂದ್ಯಕ್ಕೂ ಮುನ್ನ ಬಾಬರ್, ವಿರಾಟ್ ಕೊಹ್ಲಿ ಅವರೊಂದಿಗೆ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದರು.

ವಿರಾಟ್ ಕೊಹ್ಲಿ 125 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 38 ಅರ್ಧಶತಕಗಳನ್ನು ಬಾರಿಸಿದ್ದರೆ, ಬಾಬರ್ 139 ಪಂದ್ಯಗಳಲ್ಲಿ 39 ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ (32 ಅರ್ಧಶತಕಗಳು) ಮೂರನೇ ಸ್ಥಾನದಲ್ಲಿದ್ದರೆ, ಮೊಹಮ್ಮದ್ ರಿಜ್ವಾನ್ 30 ಅರ್ಧಶತಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಡೇವಿಡ್ ವಾರ್ನರ್ 28 ಅರ್ಧಶತಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಈ ಪಂದ್ಯದಲ್ಲಿ ಪಾಕಿಸ್ತಾನ ಪರ ಸ್ಯಾಮ್ ಅಯೂಬ್ ಮತ್ತು ಶಾದಾಬ್ ಖಾನ್ ಕೂಡ ಬಲಿಷ್ಠ ಇನ್ನಿಂಗ್ಸ್ ಆಡಿದರು. ಸ್ಯಾಮ್ ಅಯೂಬ್ 37 ಎಸೆತಗಳಲ್ಲಿ 56 ರನ್ ಗಳಿಸಿದರೆ, ಶಾದಾಬ್ ಖಾನ್ 19 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಒಳಗೊಂಡಂತೆ 46 ರನ್ ಬಾರಿಸಿದರು. ಇದು ಪಾಕಿಸ್ತಾನ ದೊಡ್ಡ ಮೊತ್ತವನ್ನು ದಾಖಲಿಸಲು ಸಹಾಯ ಮಾಡಿತು.