
PSL 2026: ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಹೊಸ ಇತಿಹಾಸ ಬರೆಯುವ ಸುವರ್ಣ ಅವಕಾಶವನ್ನು ಬಾಬರ್ ಆಝಂ (Babar Azam) ಕೂದಲೆಳೆ ಅಂತರದಲ್ಲಿ ಮಿಸ್ ಮಾಡಿಕೊಂಡಿದ್ದಾರೆ. ಅದು ಸಹ ಅತಿ ಹೆಚ್ಚು ರನ್ ಗಳಿಸಿದರೂ ಕೂಡ ಎಂಬುದು ವಿಶೇಷ.

ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ 11 ಇನಿಂಗ್ಸ್ ಆಡಿದ್ದ ಬಾಬರ್ ಆಝಂ 2 ಭರ್ಜರಿ ಶತಕ ಹಾಗೂ 3 ಅರ್ಧಶತಕಗಳನ್ನು ಬಾರಿಸಿದ್ದರು. ಈ ಮೂಲಕ ಒಟ್ಟು 588 ರನ್ ಕಲೆಹಾಕಿದ್ದರು. ಇದಕ್ಕೆ ಒಂದು ರನ್ ಸೇರ್ಪಡೆಯಾಗಿದ್ದರೆ ಹೊಸ ಇತಿಹಾಸ ನಿರ್ಮಾಣವಾಗುತ್ತಿತ್ತು.

ಅದರಂತೆ ಫೈನಲ್ ಪಂದ್ಯದಲ್ಲಿ ಬಾಬರ್ ಆಝಂ ಒಂದು ರನ್ಗಳಿಸಿದ್ದರೆ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಸೀಸನ್ವೊಂದರಲ್ಲಿ ಅತೀ ಹೆಚ್ಚು ಪೇರಿಸಿದ ಬ್ಯಾಟರ್ ಎನಿಸಿಕೊಳ್ಳುತ್ತಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಬಾಬರ್ ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಕೇವಲ 1 ರನ್ಗಳಿಂದ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಹೊಸ ಇತಿಹಾಸ ಬರೆಯುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ.

2022ರ ಪಾಕಿಸ್ತಾನ್ ಸೂಪರ್ ಲೀಗ್ ಆವೃತ್ತಿಯಲ್ಲಿ ಫಖರ್ ಝಮಾನ್ ಅವರು 13 ಇನ್ನಿಂಗ್ಸ್‌ಗಳಲ್ಲಿ 588 ರನ್ ಗಳಿಸುವ ಮೂಲಕ ಪಿಎಸ್‌ಎಲ್ ಇತಿಹಾಸದಲ್ಲೇ ಸೀಸನ್ವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಬಾಬರ್ ಸರಿಗಟ್ಟಿದ್ದರು.

ಇದಾಗ್ಯೂ ಈ ಬಾರಿ ಬಾರಿಸಿದ 588 ರನ್ಗಳೊಂದಿಗೆ ಬಾಬರ್ ಆಝಂ ಟಿ20 ಕ್ರಿಕೆಟ್ನಲ್ಲಿ 12 ಸಾವಿರ ರನ್ಗಳನ್ನು ಪೂರೈಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಇನಿಂಗ್ಸ್ಗಳ ಮೂಲಕ 12000 ರನ್ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಗೇಲ್ 343 ಇನಿಂಗ್ಸ್ಗಳ ಮೂಲಕ 12 ಸಾವಿರ ರನ್ ಪೂರೈಸಿದ್ದರೆ, ಬಾಬರ್ ಆಝಂ 338 ಇನಿಂಗ್ಸ್ಗಳ ಮೂಲಕ ಈ ಸಾಧನೆ ಮಾಡಿದ್ದಾರೆ.