
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಇಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತ ಕ್ರಿಕೆಟ್ ತಂಡದ ಆಯ್ಕೆ ಮಾಡಲಿದೆ ಎಂದು ವರದಿ ಆಗಿದೆ. ಇನ್ಸೈಡ್ ಸ್ಪೋರ್ಟ್ಸ್ ಈ ಬಗ್ಗೆ ಸುದ್ದಿ ಬಿತ್ತರಿಸಿದ್ದು ರೋಹಿತ್ ಶರ್ಮಾ ಕೂಡ ಆಯ್ಕೆಗೆ ಇರಲಿದ್ದಾರೆ ಎಂದು ಹೇಳಲಾಗಿದೆ.

ಈ ಹಿಂದೆ ರೋಹಿತ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವರದಿ ಆಗಿತ್ತು. ಆದರೀಗ ಬಿಸಿಸಿಐ ಬಲ್ಲ ಮೂಲಗಳಿಂದ ರೋಹಿತ್ಗೆ ಟೆಸ್ಟ್ ತಂಡದಿಂದ ವಿಶ್ರಾಂತಿಯಿಲ್ಲ, ಅವರನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂದು ಹೇಳಿದೆ.

ಬೇಸರದ ವಿಷಯ ಎಂದರೆ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಹಾಗೂ ಜಸ್ಪ್ರಿತ್ ಬುಮ್ರಾ ಇಂಜುರಿಯಿಂದ ಗುಣಮುಖರಾಗದ ಕಾರಣ ವೆಸ್ಟ್ ಇಂಡೀಸ್ ವಿರುದ್ಧದ ಸಂಪೂರ್ಣ ಸರಣಿಯಿಂದ ಹೊರಬಿದ್ದಿದ್ದಾರೆ.

ಕಳಪೆ ಫಾರ್ಮ್ನಿಂದ ಕಂಗೆಟ್ಟಿರುವ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಕೂಡ ಆಯ್ಕೆ ಆಗಲಿದ್ದಾರಂತೆ. ಇವರ ಜೊತೆಗೆ ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ ಕೂಡ ಟೆಸ್ಟ್ ತಂಡದಲ್ಲಿ ಇರಲಿದ್ದಾರೆ.

ಕೆಲವೊಂದು ಅಚ್ಚರಿಯ ಆಯ್ಕೆ ನಿರೀಕ್ಷಿಸಲಾಗಿದೆ. ಮುಖ್ಯವಾಗಿ ರಣಜಿ ಟ್ರೋಫಿಯಲ್ಲಿ ರನ್ ಮಳೆ ಸುರಿಸಿದ್ದ ಸರ್ಫರಾಜ್ ಖಾನ್ ಚೊಚ್ಚಲ ಬಾರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆಯಲಿದ್ದಾರಂತೆ.

ಇನ್ನು ವೆಸ್ಟ್ ಇಂಡೀಸ್ ವಿರುದ್ಧ ಭಾರತ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇದರಿಂದ ರೋಹಿತ್ ಮತ್ತು ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಹೀಗಾದಾಗ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ನಾಯಕತ್ವದ ಜವಾಬ್ದಾರಿ ವಹಿಸಲಿದ್ದಾರೆ.

ಜುಲೈ 12 ರಿಂದ ಭಾರತದ ವೆಸ್ಟ್ ಇಂಡೀಸ್ ಪ್ರವಾಸ ಟೆಸ್ಟ್ ಪಂದ್ಯದ ಮೂಲಕ ಶುರುವಾಗಲಿದೆ. ಜುಲೈ ಮೊದಲ ವಾರದಲ್ಲಿ ಭಾರತ ತಂಡ ಕೆರಿಬಿಯನ್ ನಾಡಿಗೆ ತೆರಳಲಿದೆ. ರೋಹಿತ್ ಹಾಗೂ ಕೊಹ್ಲಿ ಸದ್ಯ ಲಂಡನ್ನಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದು, ಅಲ್ಲಿಂದಲೇ ವಿಂಡೀಸ್ ನಾಡಿಗೆ ತೆರಳಲಿದ್ದಾರೆ.