
ಜಿಂಬಾಬ್ವೆಯ ವೇಗದ ಬೌಲರ್ ಬ್ಲೆಸಿಂಗ್ ಮುಜರಬಾನಿ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. 10ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದು ಅರ್ಧಶತಕ ಸಿಡಿಸಿದ ಜಿಂಬಾಬ್ವೆಯ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಈ ಮೂಲಕ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ ತಂಡದ ಬಲವನ್ನೂ ಹೆಚ್ಚಿಸಿದ್ದಾರೆ.
30 ವರ್ಷದ ಮುಜರಬಾನಿ ನವೆಂಬರ್ 16ರಂದು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಪಂದ್ಯದ ನಾಲ್ಕನೇ ದಿನ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಅವರು, ಮೊದಲ ಅವಧಿಯ ಆಟ ಮುಗಿಯುವ ವೇಳೆಗೆ 77 ಎಸೆತಗಳಲ್ಲಿ 55 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.
ತಮ್ಮ ಮೊದಲ ಟೆಸ್ಟ್ ಅರ್ಧಶತಕ ಪೂರೈಸಲು ಮುಜರಬಾನಿ ಕೇವಲ 63 ಎಸೆತಗಳನ್ನು ಎದುರಿಸಿದರು. ಇನ್ನಿಂಗ್ಸ್‌ನ 80ನೇ ಓವರ್‌ನ ಕೊನೆಯ ಎಸೆತದಲ್ಲಿ ಹಶ್ಮತುಲ್ಲಾ ಶಾಹಿದಿ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಅರ್ಧಶತಕದ ಸಂಭ್ರಮ ಆಚರಿಸಿದರು.
ಪಂದ್ಯದ ನಿರ್ಣಾಯಕ ಹಂತದಲ್ಲಿ ಗ್ರೇಮ್ ಕ್ರೀಮರ್ ಜೊತೆಗೂಡಿ ಮುಜರಬಾನಿ ಜಿಂಬಾಬ್ವೆ ತಂಡದ ಇನ್ನಿಂಗ್ಸ್‌ಗೆ ಆಸರೆಯಾದರು. ನಾಲ್ಕನೇ ದಿನದ ಮೊದಲ ಅವಧಿಯಲ್ಲಿ ಈ ಜೋಡಿ ಒಂಬತ್ತನೇ ವಿಕೆಟ್‌ಗೆ 145 ಎಸೆತಗಳಲ್ಲಿ 80 ರನ್‌ಗಳ ಅಮೂಲ್ಯ ಜೊತೆಯಾಟವಾಡಿತು. ಇದರಲ್ಲಿ ಕ್ರೀಮರ್ 77 ಎಸೆತಗಳಲ್ಲಿ 25 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು.
ಮುಜರಬಾನಿ ಅಂತಿಮವಾಗಿ 93 ಎಸೆತಗಳಲ್ಲಿ 59 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಈ ಆಕರ್ಷಕ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. ಬೌಲಿಂಗ್‌ನಲ್ಲಿ ಮಿಂಚುತ್ತಿದ್ದ ಮುಜರಬಾನಿ ಇದೀಗ ಬ್ಯಾಟಿಂಗ್‌ನಲ್ಲೂ ತಮ್ಮ ಸಾಮರ್ಥ್ಯ ತೋರಿಸಿ ಜಿಂಬಾಬ್ವೆ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.