Updated on: Aug 01, 2023 | 9:14 AM
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಅಂತಿಮ ನಿರ್ಣಾಯಕ ಮೂರನೇ ಏಕದಿನ ಇಂದು ನಡೆಯಲಿದೆ. ಟ್ರಿನಿಡಾಡ್ನ ಬ್ರಿಯನ್ ಲಾರಾ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ಏರ್ಪಡಿಸಲಾಗಿದೆ.
ಸದ್ಯ ಮೂರು ಪಂದ್ಯಗಳ ಏಕದಿನ ಸರಣಿ 1-1 ಅಂಕಗಳ ಅಂತರದ ಸಮಬಲದಲ್ಲಿದೆ. ಹೀಗಾಗಿ ಇಂದಿನ ಪಂದ್ಯ ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದ್ದು, ಗೆದ್ದವರಿಗೆ ಸರಣಿ ಸಿಗಲಿದೆ.
ತೃತೀಯ ಏಕದಿನ ಪಂದ್ಯ ನಡೆಯಲಿರುವ ಟ್ರಿನಿಡಾಡ್ನ ಬ್ರಿಯನ್ ಲಾರಾ ಸ್ಟೇಡಿಯಂನ ಪಿಚ್ ಅದ್ಭುತವಾಗಿದೆ. ಇಲ್ಲಿನ ಮೇಲ್ಮೈ ಬೌಲಿಂಗ್ ಸ್ನೇಹಿಯಾಗಿದೆ. ಇದು ನಿಧಾನವಾದ ಪಿಚ್ ಆಗಿದ್ದು ವೇಗಿಗಳಿಗಿಂತ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಾಯ ಮಾಡುತ್ತದೆ. ವೇಗಿಗಳು ಇಲ್ಲಿ ನಿಧಾನಗತಿಯ ಬೌಲಿಂಗ್‌ನಲ್ಲಿ ಹೆಚ್ಚು ಯಶಸ್ಸು ಪಡೆಯುವ ಸಾಧ್ಯತೆಯಿದೆ.
ವಿಶೇಷ ಎಂದರೆ ಕ್ರೀಡಾಂಗಣದಲ್ಲಿ ಆಡುವ ಮೊದಲ ಪುರುಷರ ಅಂತರರಾಷ್ಟ್ರೀಯ ಏಕದಿನ ಪಂದ್ಯ ಇದಾಗಲಿದೆ. ಒಟ್ಟಾರೆಯಾಗಿ ಎರಡನೇ ಪಂದ್ಯ. 2022ರಲ್ಲಿ ಇಲ್ಲಿ ನಡೆದ ಟಿ 20 ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಆಡಿದ್ದವು.
ಆದರೆ, ಈ ಪಿಚ್ ನಿಖರವಾಗಿ ಹೀಗೆ ವರ್ತಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಏಕದಿನ ಸರಣಿಯ ಬಹುಮುಖ್ಯವಾದ ಪಂದ್ಯದಲ್ಲಿ ಪಿಚ್ ಅನಿಶ್ಚಿತತೆಯಿಂದ ಕೂಡಿದೆ. ಹೀಗಾಗಿ ಟಾಸ್ ಗೆದ್ದ ತಂಡವು ಚೇಸ್ ಅನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.
ಆದರೆ ಈ ಮಹತ್ವದ ಪಂದ್ಯಕ್ಕೂ ಮುನ್ನ ಟ್ರಿನಿಡಾಡ್ನ ಹವಾಮಾನ ವರದಿ ಹೊರಬಿದ್ದಿದ್ದು, ಇಂದು ದಿನವಿಡಿ ಮೋಡ ಕವಿದ ವಾತಾವರಣ ಇರಲಿದೆ. ಹಾಗೆಯೇ 34ºC ಹೆಚ್ಚಿನ ತಾಪಮಾನವನ್ನು ನಿರೀಕ್ಷಿಸಲಾಗಿದೆ. ರಾತ್ರಿ ವೇಳೆಗೆ 25ºC ನ ಕಡಿಮೆ ತಾಪಮಾನದೊಂದಿಗೆ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ.
ಸಂಜೆ ಸಮಯದಲ್ಲಿ 24 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ ಇದೆ ಎಂದು ಹೇಳಲಾಗಿದೆ. ಜೊತೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯೂ ಹೆಚ್ಚಿದೆ ಎಂದು ವರದಿಯಾಗಿದೆ.
ಭಾರತ- ವೆಸ್ಟ್ ಇಂಡೀಸ್ ಮೂರನೇ ಏಕದಿನ ಪಂದ್ಯದ ಟಾಸ್ ಪ್ರಕ್ರಿಯೆಯು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ನಡೆಯಲಿದ್ದು, ಪಂದ್ಯ 7.30ಕ್ಕೆ ಶುರುವಾಗಲಿದೆ. ಈ ಪಂದ್ಯವನ್ನು ಡಿಡಿ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ವೀಕ್ಷಿಸಬಹುದು. ಹಾಗೆಯೆ ಫ್ಯಾನ್ ಕೋಡ್ ಆ್ಯಪ್ ಹಾಗೂ ಜಿಯೋ ಸಿನಿಮಾದಲ್ಲಿ ಲೈವ್ ಸ್ಟ್ರೀಮಿಂಗ್ ನೋಡಬಹುದು.