
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 15 ರಂದು ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಶುರುವಾಗಲಿದೆ. ಈ ಟೆಸ್ಟ್‌ಗೂ ಮುನ್ನ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸುದ್ದಿ ಹೊರಬಿದ್ದಿದೆ. ಚೇತೇಶ್ವರ್ ಪೂಜಾರ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಮತ್ತು ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಸೌರಾಷ್ಟ್ರ ಕ್ರಿಕೆಟ್ ಗೌರವಿಸಲಿದೆ. ಇಬ್ಬರೂ ಸೌರಾಷ್ಟ್ರ ಪರ ದೇಶೀಯ ಕ್ರಿಕೆಟ್ ಆಡಿದ್ದಾರೆ.

ಚೇತೇಶ್ವರ ಪೂಜಾರ ಪ್ರಸಕ್ತ ರಣಜಿ ಋತುವಿನಲ್ಲಿ ಸೌರಾಷ್ಟ್ರ ಪರ ಆಡುತ್ತಿದ್ದಾರೆ. ಮತ್ತೊಂದೆಡೆ, ರವೀಂದ್ರ ಜಡೇಜಾ ಇಂಜುರಿಯಿಂದಾಗಿ ಎರಡನೇ ಟೆಸ್ಟ್ನಿಂದ ಸಹೊರಗುಳಿದಿದ್ದಾರೆ. ಆದಾಗ್ಯೂ, ಇಂಗ್ಲೆಂಡ್ ವಿರುದ್ಧದ ಕೊನೆಯ 3 ಟೆಸ್ಟ್‌ಗಳಿಗೆ ಆಯ್ಕೆ ಮಾಡಲಾಗಿದ್ದು, ಕಣಕ್ಕಿಳಿಯಲಿದ್ದಾರೆ. ಇದಕ್ಕೂ ಮುನ್ನ ಇವರಿಬ್ಬರಿಗೆ ಸನ್ಮಾನ ಮಾಡಲಾಗುತ್ತದೆ.

ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್ ಆರಂಭದ ಒಂದು ದಿನ ಮುಂಚಿತವಾಗಿ ನಂಬರ್ ಒನ್ ಟೆಸ್ಟ್ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು 100 ಟೆಸ್ಟ್‌ಗಳನ್ನು ಆಡಿದ 13 ನೇ ಭಾರತೀಯ ಚೇತೇಶ್ವರ ಪೂಜಾರ ಅವರನ್ನು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಫೆಬ್ರವರಿ 14 ರಂದು ಸನ್ಮಾನಿಸಲಿದೆ. ಕ್ರೀಡಾಂಗಣದ ಮರುನಾಮಕರಣ ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜಯದೇವ್ ಶಾ ಮಾತನಾಡಿ, 'ಕ್ರೀಡಾಂಗಣದ ಮರುನಾಮಕರಣ ಸಮಾರಂಭದಲ್ಲಿ ಪೂಜಾರ ಮತ್ತು ರವೀಂದ್ರ ಅವರನ್ನು ಸನ್ಮಾನಿಸಲಾಗುವುದು' ಎಂದು ಹೇಳಿದ್ದಾರೆ. ಜೊತೆಗೆ ಇಬ್ಬರು ಸ್ಥಳೀಯ ಆಟಗಾರರಾದ ಪೂಜಾರ ಮತ್ತು ಜಡೇಜಾ ಅವರು ಇಂಗ್ಲೆಂಡ್ ವಿರುದ್ಧ ಒಟ್ಟಿಗೆ ಆಡುವ ಅವಕಾಶ ಪಡೆದಿದ್ದರೆ ಉತ್ತಮವಾಗಿರುತ್ತಿತ್ತು ಎಂದರು.

ಪೂಜಾರ ಬಹಳ ದಿನಗಳಿಂದ ರಾಷ್ಟ್ರೀಯ ತಂಡದಿಂದ ದೂರ ಉಳಿದಿದ್ದಾರೆ. ಅವರನ್ನು ಸದ್ಯ ಆಯ್ಕೆಗೆ ಬಿಸಿಸಿಐ ಪರಿಗಣಿಸುತ್ತಿಲ್ಲ. ಈ ಕುರಿತು ಮಾತನಾಡಿದ ಜಯದೇವ್, ''ಈ ಬಗ್ಗೆ ನಾನು ಹೆಚ್ಚು ಹೇಳಲಾರೆ. ಏಕೆಂದರೆ ಇದು ತಂಡದ ನಿರ್ವಹಣೆ ಮತ್ತು ಆಯ್ಕೆಗಾರರ ನಿರ್ಧಾರ. ಆದರೆ ಅವರಿಗೆ ಆಡಲು ಅವಕಾಶ ಸಿಕ್ಕರೆ ಉತ್ತಮವಾಗಿರುತ್ತಿತ್ತು. ಆದರೆ, ಸೌರಾಷ್ಟ್ರ ಅವರ ಬಗ್ಗೆ ಹೆಮ್ಮೆ ಪಡುತ್ತದೆ,'' ಎಂದರು.