
ಆಗಸ್ಟ್ 7 ರಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ವಾರ್ಷಿಕ ಪ್ರಶಸ್ತಿಗಳ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ. ಅದರಂತೆ 2025-26 ರ ಆಶಸ್‌ನಲ್ಲಿ ಆರಂಭಿಕ ಆಟಗಾರನಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ಹೆಡ್, ಸತತ ಎರಡನೇ ಬಾರಿಗೆ ಆಸ್ಟ್ರೇಲಿಯಾದ ಕ್ರಿಕೆಟ್‌ನ ಉನ್ನತ ಪುರುಷರ ಪ್ರಶಸ್ತಿಯಾದ ಅಲನ್ ಬಾರ್ಡರ್ ಪದಕವನ್ನು ಗೆದ್ದಿದ್ದಾರೆ.

ಸತತ ಎರಡನೇ ಬಾರಿಗೆ ಈ ಪದಕ ಗೆಲ್ಲುವ ಮೂಲಕ ಟ್ರಾವಿಸ್ ಹೆಡ್, ಮಿಚೆಲ್ ಸ್ಟಾರ್ಕ್ ಮತ್ತು ಅಲೆಕ್ಸ್ ಕ್ಯಾರಿ ಅವರನ್ನು ಹಿಂದಿಕ್ಕಿದ್ದಾರೆ. ಇದೀಗ ಹೆಡ್, ಒಂದಕ್ಕಿಂತ ಹೆಚ್ಚು ಬಾರಿ ಅಲನ್ ಬಾರ್ಡರ್ ಪದಕವನ್ನು ಗೆದ್ದ ಆರನೇ ಆಸ್ಟ್ರೇಲಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹೆಡ್ಗೂ ಮೊದಲು ರಿಕಿ ಪಾಂಟಿಂಗ್, ಮೈಕೆಲ್ ಕ್ಲಾರ್ಕ್ ಮತ್ತು ಸ್ಟೀವ್ ಸ್ಮಿತ್ ತಲಾ ನಾಲ್ಕು ಬಾರಿ ಈ ಪದಕವನ್ನು ಗೆದ್ದಿದ್ದರೆ, ಡೇವಿಡ್ ವಾರ್ನರ್ ಮೂರು ಬಾರಿ ಮತ್ತು ಶೇನ್ ವ್ಯಾಟ್ಸನ್ ಎರಡು ಬಾರಿ ಪದಕವನ್ನು ಗೆದ್ದಿದ್ದಾರೆ. ಈಗ, ಹೆಡ್ ಈ ದಿಗ್ಗಜರ ಪಟ್ಟಿಗೆ ಸೇರಿದ್ದಾರೆ.

ಎರಡನೇ ಬಾರಿಗೆ ಅಲನ್ ಬಾರ್ಡರ್ ಪದಕವನ್ನು ಗೆದ್ದಿದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ಹೆಡ್, ‘ಸ್ಟಾರ್ಕ್ ಮತ್ತು ಅಲೆಕ್ಸ್ ಕ್ಯಾರಿ ಕೂಡ ಈ ವರ್ಷ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ಈ ಪ್ರಶಸ್ತಿಯನ್ನು ಗೆಲ್ಲಬಹುದೆಂದು ನಾನು ಭಾವಿಸಿದ್ದೆ. ಹಾಗಾಗಿ, ನಾನು ಈ ಪದಕ ರೇಸ್ನಲ್ಲಿ ಇರುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ’ ಎಂದಿದ್ದಾರೆ.

ಟ್ರಾವಿಸ್ ಹೆಡ್ ಹೊರತುಪಡಿಸಿ, ಈ ಬಾರಿ ಆಸ್ಟ್ರೇಲಿಯಾ ಪ್ರಶಸ್ತಿಗಳನ್ನು ಗೆದ್ದ ಇತರ ಆಟಗಾರರಲ್ಲಿ ಮಿಚೆಲ್ ಮಾರ್ಷ್ ಸೇರಿದ್ದಾರೆ. ಏಕದಿನ ಮಾದರಿಯಲ್ಲಿ 60 ರ ಸರಾಸರಿಯಲ್ಲಿ 304 ರನ್ ಗಳಿಸಿದ ಮಾರ್ಷ್ ವರ್ಷದ ಏಕದಿನ ಆಟಗಾರ ಎನಿಸಿಕೊಂಡಿದ್ದರೆ, ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪರ ಅದ್ಭುತ ಪ್ರದರ್ಶನ ನೀಡಿದ ಟಿಮ್ ಡೇವಿಡ್, 49.37 ಸರಾಸರಿಯಲ್ಲಿ 395 ರನ್ ಗಳಿಸುವ ಮೂಲಕ ಟಿ20 ವರ್ಷದ ಆಟಗಾರ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದರು.