
ಆಸ್ಟ್ರೇಲಿಯಾ ತಂಡವು ಏಕದಿನ ಕ್ರಿಕೆಟ್ ಆಡಲು ಶುರುವಾಗಿ 54 ವರ್ಷಗಳಾಗಿವೆ. ಈ ಐವತ್ತ ನಾಲ್ಕು ವರ್ಷಗಳಲ್ಲಿ ಕಂಡರಿಯರ ಕೇಳರಿಯದ ರೀತಿಯಲ್ಲಿ ಆಸೀಸ್ ಪಡೆ ಇದೇ ಮೊದಲ ಬಾರಿಗೆ ಮುಗ್ಗರಿಸಿದೆ. ಅದು ಕೂಡ ಬ್ಯಾಕ್ ಟು ಬ್ಯಾಕ್ ನಾಲ್ಕು ಪಂದ್ಯಗಳಲ್ಲಿ ಎಂಬುದೇ ಅಚ್ಚರಿ.

ಆಸ್ಟ್ರೇಲಿಯಾ ತಂಡವು ತವರಿನಲ್ಲಿ ಆಡಿದ ಕಳೆದ ನಾಲ್ಕು ಪಂದ್ಯಗಳಲ್ಲೂ 200 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಅಂದರೆ ತವರಿನಲ್ಲಿ ನಡೆದ ಕೊನೆಯ ನಾಲ್ಕು ಒಡಿಐ ಮ್ಯಾಚ್ಗಳಲ್ಲಿ ಸೋತಿದ್ದು ಮಾತ್ರವಲ್ಲ, ಬದಲಾಗಿ ಒಂದೇ ಒಂದು ಪಂದ್ಯದಲ್ಲಿ 200 ರನ್ ಕಲೆಹಾಕಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.

ಕಳೆದ 54 ವರ್ಷಗಳ ಏಕದಿನ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡವು ಒಮ್ಮೆಯೂ ತವರಿನಲ್ಲಿ ಸತತ 4 ಪಂದ್ಯಗಳಲ್ಲಿ 200 ಕ್ಕಿಂತ ಕಡಿಮೆ ಸ್ಕೋರ್ ಗಳಿಸಿ ಆಲೌಟ್ ಆಗಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಆಸೀಸ್ ಪಡೆಯನ್ನು ಮಕಾಡೆ ಮಲಗಿಸುವಲ್ಲಿ ಪಾಕಿಸ್ತಾನ್ ಹಾಗೂ ಸೌತ್ ಆಫ್ರಿಕಾ ತಂಡಗಳು ಯಶಸ್ವಿಯಾಗಿದೆ.

ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಪಾಕಿಸ್ತಾನ್ ತಂಡ 2-1 ಅಂತರದಿಂದ ಗೆದ್ದುಕೊಂಡಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಈ ಸರಣಿಯ 2ನೇ ಪಂದ್ಯದಲ್ಲಿ ಆತಿಥೇಯರನ್ನು ಪಾಕ್ ಪಡೆ 163 ರನ್ಗಳಿಗೆ ಆಲೌಟ್ ಮಾಡಿದ್ದರು. ಇನ್ನು ಮೂರನೇ ಏಕದಿನ ಪಂದ್ಯದಲ್ಲಿ ಪಾಕ್ ವಿರುದ್ಧ ಆಸ್ಟ್ರೇಲಿಯಾ ಕೇವಲ 140 ರನ್ಗಳಿಸಿ ಆಲೌಟ್ ಆಗಿತ್ತು.

ಈ ಸರಣಿಯ ಬಳಿಕ ಆಸ್ಟ್ರೇಲಿಯಾ ಇದೀಗ ಸೌತ್ ಆಫ್ರಿಕಾ ವಿರುದ್ಧ ಕಣಕ್ಕಿಳಿಯುತ್ತಿದೆ. ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 198 ರನ್ಗಳಿಗೆ ಆಲೌಟ್ ಮಾಡುವಲ್ಲಿ ಸೌತ್ ಆಫ್ರಿಕಾ ಬೌಲರ್ಗಳು ಯಶಸ್ವಿಯಾಗಿದ್ದಾರೆ. ಇನ್ನು 2ನೇ ಏಕದಿನ ಪಂದ್ಯದಲ್ಲಿ 193 ರನ್ಗಳಿಗೆ ಆಸೀಸ್ ಪಡೆ ಸರ್ವಪತನ ಕಂಡಿದೆ.

ಇದರೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡವು ತವರಿನಲ್ಲಿ ಬ್ಯಾಕ್ ಟು ಬ್ಯಾಕ್ 4 ಏಕದಿನ ಪಂದ್ಯದಲ್ಲಿ 200 ರನ್ ಗಳಿಸಲಾಗದೇ ಹೀನಾಯವಾಗಿ ಸೋಲನುಭವಿಸಿದೆ. ಈ ಅವಮಾನಕರ ಸೋಲುಗಳೊಂದಿಗೆ ತವರಿನ ಹುಲಿಗಳೆಂದು ಗುರುತಿಸಿಕೊಂಡಿದ್ದ ಆಸ್ಟ್ರೇಲಿಯಾ ತಂಡವು ಭಾರೀ ಮುಖಭಂಗ ಅನುಭವಿಸಿದೆ.
Published On - 7:54 am, Sun, 24 August 25