
WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ನ 2ನೇ ಪಂದ್ಯದಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಅದು ಕೂಡ ಸಿಕ್ಸರ್ಗಳ ಸುರಿಮಳೆಯೊಂದಿಗೆ. ಅಂದರೆ ಒಂದೇ ಪಂದ್ಯದಲ್ಲಿ ಅತ್ಯಧಿಕ ಸಿಕ್ಸ್ ಮೂಡಿಬಂದ ಹೊಸ ದಾಖಲೆಯನ್ನು ಗುಜರಾತ್ ಜೈಂಟ್ಸ್ ಹಾಗೂ ಯುಪಿ ವಾರಿಯರ್ಸ್ ತಂಡಗಳು ನಿರ್ಮಿಸಿದೆ.

ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡದ ಪರ ಸೋಫಿ ಡಿವೈಲ್ 2 ಸಿಕ್ಸ್ ಬಾರಿಸಿದರೆ, ಆಶ್ಲೀ ಗಾರ್ಡ್ನರ್ ಹಾಗೂ ಜಾರ್ಜಿಯಾ ವೇರ್‌ಹ್ಯಾಮ್ ತಲಾ 3 ಸಿಕ್ಸ್ ಸಿಡಿಸಿದರು. ಇನ್ನು ಅಂತಿಮ ಹಂತದಲ್ಲಿ ಭಾರ್ತಿ ಫುಲ್ಮಾಲಿ 2 ಸಿಕ್ಸ್ ಬಾರಿಸಿದರು. ಈ ಮೂಲಕ ಗುಜರಾತ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 207 ರನ್ ಕಲೆಹಾಕಿತು.

208 ರನ್ಗಳ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ ಪರ ಆರಂಭಿಕ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ ಬರೋಬ್ಬರಿ 5 ಸಿಕ್ಸ್ ಸಿಡಿಸಿದ್ದರು. ಇನ್ನು ಶ್ವೇತಾ ಸೆಹ್ರಾವತ್ ಬ್ಯಾಟ್ನಿಂದ 3 ಹಾಗೂ ಆಶಾ ಶೋಭನಾ ಕಡೆಯಿಂದ 2 ಸಿಕ್ಸರ್ಗಳು ಮೂಡಿಬಂದಿದ್ದವು. ಹಾಯೆಯೇ ಡಿಯಾಂಡ್ರಾ ಡಾಟಿನ್ 1 ಸಿಕ್ಸ್ ಬಾರಿಸಿದ್ದರು. ಈ ಮೂಲಕ ಯುಪಿ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 197 ರನ್ಗಳಿಸಿ ಕೇವಲ 10 ರನ್ಗಳಿಂದ ಸೋಲೊಪ್ಪಿಕೊಂಡಿತ್ತು.

ವಿಶೇಷ ಎಂದರೆ ಈ ಎರಡು ಇನಿಂಗ್ಸ್ಗಳಲ್ಲಿ ಮೂಡಿಬಂದ ಒಟ್ಟು ಸಿಕ್ಸ್ಗಳ ಸಂಖ್ಯೆ ಬರೋಬ್ಬರಿ 21 . ಗುಜರಾತ್ ಜೈಂಟ್ಸ್ ತಂಡದ ಬ್ಯಾಟರ್ಗಳು 10 ಸಿಕ್ಸ್ ಬಾರಿಸಿದರೆ, ಯುಪಿ ವಾರಿಯರ್ಸ್ ಆಟಗಾರ್ತಿಯರು 11 ಸಿಕ್ಸ್ ಸಿಡಿಸಿದ್ದರು. ಈ ಮೂಲಕ ಮಹಿಳಾ ಟಿ20 ಪಂದ್ಯದಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆಯನ್ನು ಯುಪಿ ವಾರಿಯರ್ಸ್-ಗುಜರಾತ್ ಜೈಂಟ್ಸ್ ತಂಡ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಭರ್ಜರಿ ವಿಶ್ವ ದಾಖಲೆ ಸಿಡ್ನಿ ಸಿಕ್ಸರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ತಂಡಗಳ ಹೆಸರಿನಲ್ಲಿತ್ತು. 2018ರ ವುಮೆನ್ಸ್ ಬಿಗ್ ಬ್ಯಾಷ್ ಲೀಗ್ನಲ್ಲಿ ಸಿಡ್ನಿ ಸಿಕ್ಸರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ತಂಡಗಳು ಜೊತೆಗೂಡಿ ಒಟ್ಟು 19 ಸಿಕ್ಸ್ ಸಿಡಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ 21 ಸಿಕ್ಸರ್ಗಳೊಂದಿಗೆ ಈ ವರ್ಲ್ಡ್ ರೆಕಾರ್ಡ್ ಅನ್ನು ಮುರಿಯುವಲ್ಲಿ ಯುಪಿ ವಾರಿಯರ್ಸ್-ಗುಜರಾತ್ ಜೈಂಟ್ಸ್ ಬ್ಯಾಟರ್ಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ ಮಹಿಳಾ ಟಿ20 ಪಂದ್ಯದಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆಯನ್ನು ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ತಮ್ಮದಾಗಿಸಿಕೊಂಡಿದ್ದಾರೆ.
Published On - 8:31 am, Sun, 11 January 26