
ಟಿ20 ಕ್ರಿಕೆಟ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಸ್ಫೋಟಕ ಸೆಂಚುರಿ ಸಿಡಿಸುವ ಮೂಲಕ. ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ವಾಷಿಂಗ್ಟನ್ ಫ್ರೀಡಂ ಪರ ಕಣಕ್ಕಿಳಿಯುತ್ತಿರುವ ಮ್ಯಾಕ್ಸ್ವೆಲ್ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಶತಕ ಬಾರಿಸಿದ್ದಾರೆ.

ಈ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ವೆಲ್ ಕೇವಲ 48 ಎಸೆತಗಳಲ್ಲಿ ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಶತಕದ ವೇಳೆ ಅವರ ಬ್ಯಾಟ್ನಿಂದ ಮೂಡಿಬಂದ ಸಿಕ್ಸರ್ಗಳ ಸಂಖ್ಯೆ ಬರೋಬ್ಬರಿ 13. ಅಲ್ಲದೆ ಪ್ರಚಂಡ ಬ್ಯಾಟಿಂಗ್ನೊಂದಿಗೆ ಟಿ20 ಕ್ರಿಕೆಟ್ನಲ್ಲಿ 10500 ರನ್ ಪೂರೈಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 10500+ ರನ್ ಕಲೆಹಾಕಿದ ವಿಶ್ವದ 16ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ವಿಶೇಷ ಎಂದರೆ ಗ್ಲೆನ್ ಮ್ಯಾಕ್ಸ್ವೆಲ್ ಟಿ20 ಕ್ರಿಕೆಟ್ನಲ್ಲಿ 10500+ ರನ್ಗಳೊಂದಿಗೆ 170 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ. ಇದರ ನಡುವೆ 8 ಭರ್ಜರಿ ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 10500+ ರನ್ಸ್, 150+ ವಿಕೆಟ್ಸ್ ಹಾಗೂ 8 ಶತಕಗಳನ್ನು ಬಾರಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹಾಗೆಯೇ ಟಿ20 ಕ್ರಿಕೆಟ್ನಲ್ಲಿ 8 ಶತಕ ಬಾರಿಸಿದ ವಿಶ್ವದ 6ನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸಹ ಗ್ಲೆನ್ ಮ್ಯಾಕ್ಸ್ವೆಲ್ ತಮ್ಮದಾಗಿಸಿಕೊಂಡಿದ್ದಾರೆ. ಮ್ಯಾಕ್ಸಿ ಅವರ ಈ ದಾಖಲೆಯ ಮುಂದಿರುವುದು ವಿರಾಟ್ ಕೊಹ್ಲಿ. ಕಿಂಗ್ಸ್ ಕೊಹ್ಲಿ 9 ಶತಕಗಳೊಂದಿಗೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ಮ್ಯಾಕ್ಸ್ವೆಲ್ ಬ್ಯಾಟ್ನಿಂದ ಶತಕ ಮೂಡಿಬಂದರೆ ತೃತೀಯ ಸ್ಥಾನಕ್ಕೇರಬಹುದು.

ಇನ್ನು ಈ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಬಾರಿಸಿದ 106 ರನ್ಗಳ ನೆರವಿನೊಂದಿಗೆ ವಾಷಿಂಗ್ಟನ್ ಫ್ರೀಡಂ ತಂಡವು 20 ಓವರ್ಗಳಲ್ಲಿ 208 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು 16.3 ಓವರ್ಗಳಲ್ಲಿ 95 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ವಾಷಿಂಗ್ಟನ್ ಫ್ರೀಡಂ ತಂಡವು 113 ರನ್ಗಳ ಭರ್ಜರಿ ಜಯ ಸಾಧಿಸಿದೆ.