ರಾಂಚಿಯ ಜೆಎಸ್ಸಿಎ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಮೂರನೇ ದಿನದಾಟದಲ್ಲಿ ಎಲ್ಲವೂ ಬದಲಾಗಿದ್ದು, ಆಂಗ್ಲರು ಕೇವಲ 145 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಟೀಮ್ ಇಂಡಿಯಾಕ್ಕೆ ಗೆಲ್ಲಲು 192 ರನ್ಗಳ ಟಾರ್ಗೆಟ್ ನೀಡಿತು.
ಗುರಿ ಬೆನ್ನಟ್ಟಲು ಶುರುಮಾಡಿದ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದೆ. ರೋಹಿತ್ ಶರ್ಮಾ (24) ಹಾಗೂ ಯಶಸ್ವಿ ಜೈಸ್ವಾಲ್ (16) ಕ್ರೀಸ್ನಲ್ಲಿದ್ದಾರೆ. ಟೀಮ್ ಇಂಡಿಯಾ ಗೆಲುವಿಗೆ 152 ರನ್ಗಳ ಅವಶ್ಯತೆ ಇದೆ. ಆದರೆ, ಇದು ಸುಲಭವಲ್ಲ. ಯಾಕೆಂದರೆ ನಾಲ್ಕನೇ ದಿನ ಪಿಚ್ ಮತ್ತಷ್ಟು ರೋಚಕತೆ ಸೃಷ್ಟಿಸಲಿದ್ದು, ಸ್ಪಿನ್ನರ್ಗಳಿಗೆ ಹೇಳಿ ಮಾಡಿಸಿದಂತಿರುತ್ತದೆ. ಹೀಗಾಗಿ ಭಾರತ ಎಚ್ಚರಿಕೆಯಿಂದ ಬ್ಯಾಟ್ ಮಾಡಿದರಷ್ಟೆ ಗೆಲುವು ಸಾಧ್ಯ.
ಮೂರನೇ ದಿನ ಭಾರತವನ್ನು 307 ರನ್ಗೆ ಆಲೌಟ್ ಮಾಡಿ 46 ರನ್ಗಳ ಮುನ್ನಡೆಯೊಂದಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮತ್ತೊಮ್ಮೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಬೆನ್ ಡಕೆಟ್ ಕೇವಲ 15 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡರೆ, ನಂತರ ಬಂದ ಒಲಿ ಪೋಪ್ ಮತ್ತೊಮ್ಮೆ ನಿರಾಸೆ ಮೂಡಿಸಿದರು.
ಮೊದಲ ಇನ್ನಿಂಗ್ಸ್ನಲ್ಲಿ ಅಜೇಯ ಶತಕ ಸಿಡಿಸಿದ್ದ ರೂಟ್ಗೆ ಎರಡನೇ ಇನ್ನಿಂಗ್ಸ್ನಲ್ಲಿ 11 ರನ್ ದಾಟಿ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಬಳಿಕ ಒಂದರ ಹಿಂದೆ ಒಂದರಂತೆ ವಿಕೆಟ್ ಪತನದ ನಡುವೆಯೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಆರಂಭಿಕ ಝಾಕ್ ಕ್ರೌಲಿ 91 ಎಸೆತಗಳಲ್ಲಿ 60 ರನ್ಗಳ ಇನ್ನಿಂಗ್ಸ್ ಆಡಿದರು.
ನಾಯಕ ಬೆನ್ ಸ್ಟೋಕ್ಸ್ ಮತ್ತೊಂದು ಕಳಪೆ ಇನ್ನಿಂಗ್ಸ್ ಆಡುವ ಮೂಲಕ ಸಿಂಗಲ್ ಡಿಜಿಟ್ಗೆ ವಿಕೆಟ್ ಒಪ್ಪಿಸುವ ತಮ್ಮ ಖಯಾಲಿಯನ್ನು ಮುಂದುವರೆಸಿದರು. ಸ್ಟೋಕ್ಸ್ 4 ರನ್‌ಗಳಿಗೆ ಸುಸ್ತಾದರೆ, ಜಾನಿ ಬೈರ್ಸ್ಟೋವ್ 30 ರನ್ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಇಂಗ್ಲೆಂಡ್ ಕೇವಲ 145 ರನ್‌ಗಳಿಗೆ ಸರ್ವಪತನ ಕಂಡಿತು.
ಭಾರತದ ಪರ ಮಾರಕ ದಾಳಿ ನಡೆಸಿದ ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ 5 ವಿಕೆಟ್ ಕಿತ್ತ ಸಾಧನೆ ಮಾಡಿದರೆ, ಕುಲ್ದೀಪ್ ಯಾದವ್ 4 ಪ್ರಮುಖ ವಿಕೆಟ್ ಪಡೆದು ಆಂಗ್ಲರ ಪತನಕ್ಕೆ ಕಾರಣರಾದರು. ಉಳಿದೊಂದು ವಿಕೆಟ್ ರವೀಂದ್ರ ಜಡೇಜಾ ಪಾಲಾಯಿತು.