
ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಭಾರತದ ಗೆಲುವಿಗೆ 192 ರನ್ಗಳ ಗುರಿ ಸಿಕ್ಕಿದೆ. ಈ ಟಾರ್ಗೆಟ್ ಬೆನ್ನಟ್ಟಿರುವ ಟೀಂ ಇಂಡಿಯಾದ ಮೂರನೇ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 40 ರನ್ ಕಲೆಹಾಕಿದೆ.

ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿರುವ ನಾಯಕ ರೋಹಿತ್ ಶರ್ಮಾ 27 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ ಅಜೇಯ 24 ರನ್ ಸಿಡಿಸಿದರೆ, ಯಶಸ್ವಿ ಜೈಸ್ವಾಲ್ 21 ಎಸೆತಗಳನ್ನು ಎದುರಿಸಿ 1 ಬೌಂಡರಿ ಸಹಿತ ಅಜೇಯ 16 ರನ್ ಕಲೆಹಾಕಿದ್ದಾರೆ.

ಎರಡನೇ ಇನ್ನಿಂಗ್ಸ್ನಲ್ಲಿ ಅಜೇಯ 24 ರನ್ ಕಲೆಹಾಕಿರುವ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ 4000 ರನ್ ಪೂರೈಸಿದ್ದಾರೆ. ಈ ಮೂಲಕ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ 17ನೇ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.

ಅಲ್ಲದೆ ರೋಹಿತ್ ಭಾರತದ ಪರ ಅತಿ ವೇಗವಾಗಿ 4000 ರನ್ ಪೂರೈಸಿದ 10 ನೇ ಆಟಗಾರ ಎನಿಸಿಕೊಂಡಿದ್ದಾರೆ. ಭಾರತದ ಪರ ಇದುವರೆಗೆ 58 ಟೆಸ್ಟ್ ಪಂದ್ಯಗಳನ್ನಾಡಿರುವ ರೋಹಿತ್, 100 ಇನ್ನಿಂಗ್ಸ್‌ಗಳಲ್ಲಿ 4000 ರನ್ಗಳ ಗಡಿ ದಾಟಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ತಂಡದ ಮಾಜಿ ಆರಂಭಿಕ ಆಟಗಾರ ಸಿಡಿಲಮರಿ ವೀರೇಂದ್ರ ಸೆಹ್ವಾಗ್ ಕೇವಲ 79 ಇನ್ನಿಂಗ್ಸ್‌ಗಳಲ್ಲಿ 4000 ರನ್ ಪೂರೈಸಿದ್ದರು.

2013ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ರೋಹಿತ್ ಇದುವರೆಗೆ ಭಾರತ ಪರ 58 ಪಂದ್ಯಗಳನ್ನು ಆಡಿದ್ದು, 44 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಈ ಮಾದರಿಯಲ್ಲಿ 11 ಶತಕ, 16 ಅರ್ಧಶತಕ ಸಿಡಿಸಿರುವ ರೋಹಿತ್ ಖಾತೆಯಲ್ಲಿ 1 ದ್ವಿಶತಕವೂ ಸೇರಿದೆ.

ಆರಂಭದಲ್ಲಿ ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿದ್ದ ರೋಹಿತ್, 2019 ರಲ್ಲಿ ಆರಂಭಿಕರಾಗಿ ಬಡ್ತಿ ಪಡೆದರು. ಆ ನಂತರ ಆರಂಭಿಕರಾಗಿ ಕಣಕ್ಕಿಳಿದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲೇ ರೋಹಿತ್ 212 ರನ್ಗಳ ದಾಖಲೆಯ ದ್ವಿಶತಕ ಸಿಡಿಸಿದ್ದರು.