
ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಣ ತೆಂಡೂಲ್ಕರ್-ಅ್ಯಂಡರ್ಸನ್ ಟೆಸ್ಟ್ ಸರಣಿಯ ಮೊದಲ ಪಂದ್ಯವು ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೂರನೇ ದಿನದಾಟದಂದು ಇಂಗ್ಲೆಂಡ್ ತಂಡದಲ್ಲಿರದ ಆಟಗಾರನನ್ನು ಮೈದಾನಕ್ಕಿಳಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.

ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನ 7ನೇ ಓವರ್ ವೇಳೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಡ್ರೆಸ್ಸಿಂಗ್ ರೂಮ್ಗೆ ತೆರಳಿದ್ದರು. ಈ ವೇಳೆ ಅವರ ಬದಲಿಯಾಗಿ ಫೀಲ್ಡರ್ಗೆ ಬಂದಿದ್ದು ತಂಡದಲ್ಲಿ ಇರದ ಯುವ ಆಟಗಾರ ಯಶ್ ವಗಾಡಿಯಾ. ಅಂದರೆ 12ನೇ ಆಟಗಾರನಾಗಿ ಯಶ್ ಅವರನ್ನು ಫೀಲ್ಡಿಂಗ್ನಲ್ಲಿ ಕಣಕ್ಕಿಳಿಸಲಾಗಿತ್ತು.

ಹೀಗೆ ಕಣಕ್ಕಿಳಿಸಲು ಮುಖ್ಯ ಕಾರಣ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ನ ಹೊಸ ಪ್ರಯೋಗ. ಇಸಿಬಿ ರಾಷ್ಟ್ರೀಯ ಪ್ಲೇಯರ್ಸ್ ಜೊತೆ ಬೆರೆಯಲು, ಅವರಿಂದ ಕಲಿಯಲು ಯುವ ಆಟಗಾರರಿಗೆ ಅನುವು ಮಾಡಿಕೊಡುತ್ತಿದೆ. ಅದರ ಭಾಗವಾಗಿ ಆಯಾ ಹೋಮ್ ಗ್ರೌಂಡ್ನ ಕೌಂಟಿ ತಂಡದ ಯುವ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ.

ಹೀಗೆ ಆಯ್ಕೆಯಾದ ಯುವ ಆಟಗಾರರನ್ನು ಇಂಗ್ಲೆಂಡ್ ತಂಡವು ತನ್ನ 12ನೇ ಪ್ಲೇಯರ್ ಎಂದು ಪರಿಗಣಿಸಿ, ಫೀಲ್ಡಿಂಗ್ ವೇಳೆ ಕಣಕ್ಕಿಳಿಸುತ್ತಿದ್ದಾರೆ. ಈ ಮೂಲಕ ಯುವ ಆಟಗಾರರನ್ನು ಸಜ್ಜುಗೊಳಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ವಿಶೇಷ ಪ್ಲ್ಯಾನ್ ರೂಪಿಸಿದೆ.

ಅದರ ಭಾಗವಾಗಿ ಯಶ್ ವಗಾಡಿಯಾ ಭಾರತದ ವಿರುದ್ಧದ ಪಂದ್ಯದ ವೇಳೆ ಕಾಣಿಸಿಕೊಂಡಿದ್ದಾರೆ. ಇನ್ನು ಯಶ್ ಭಾರತೀಯ ಮೂಲದ ಇಂಗ್ಲೆಂಡ್ ಪ್ರಜೆ ಎಂಬುದು ವಿಶೇಷ. ಇಂಗ್ಲೆಂಡ್ ಕೌಂಟಿ ಕ್ರಿಕೆಟ್ನಲ್ಲಿ ಯಾರ್ಕ್ ಶೈರ್ ಪರ ಕಣಕ್ಕಿಳಿಯುವ ಯಶ್ ಇದೀಗ ಲೀಡ್ಸ್ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡದ ಹೆಚ್ಚುವರಿ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 471 ರನ್ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು 465 ರನ್ಗಳಿಸಿ ಸರ್ವಪತನ ಕಂಡಿದೆ. ಇದೀಗ 6 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 90 ರನ್ ಕಲೆಹಾಕಿದೆ.