Updated on: Jul 10, 2023 | 8:25 AM
ಭಾರತ ಪರ 100ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿರುವ ಟೀಂ ಇಂಡಿಯಾದ ವೇಗದ ಬೌಲರ್ ಇಶಾಂತ್ ಶರ್ಮಾ ಬಹಳ ದಿನಗಳಿಂದ ತಂಡದಿಂದ ಹೊರಗುಳಿದಿದ್ದಾರೆ. ವರ್ಷಗಳಿಂದ ಇಶಾಂತ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದು, ಇದೀಗ ತಮ್ಮ ವೃತ್ತಿ ಬದುಕಿಗೆ ಹೊಸ ಆಯಾಮ ನೀಡಲು ಮುಂದಾಗಿದ್ದಾರೆ.
ಈ ವರ್ಷ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಇಶಾಂತ್, 2021ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಸದ್ಯ ಸಿರಾಜ್, ಅರ್ಷದೀಪ್, ನವದೀಪ್, ಉಮ್ರಾನ್ ಸೇರಿದಂತೆ ಹಲವು ವೇಗದ ಬೌಲರ್ಗಳು ತಂಡದಲ್ಲಿ ಸ್ಥಾನ ಪಡೆಯುವ ರೇಸ್ನಲ್ಲಿದ್ದಾರೆ. ಹೀಗಾಗಿ ಇಶಾಂತ್ ತಂಡ ಸೇರುವ ಸಾಧ್ಯತೆ ತೀರಾ ಕಡಿಮೆ.
ಇವೆಲ್ಲದರ ನಡುವೆ ಇಶಾಂತ್ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಶಾಂತ್, ಟೀಂ ಇಂಡಿಯಾ ಪರ ಮೈದಾನದಲ್ಲಿ ಕಾಣಿಸದಿದ್ದರೂ ಮೈದಾನದ ಹೊರಗೆ ಕಾಮೆಂಟರಿ ಬಾಕ್ಸ್ನಲ್ಲಿ ಕಾಮೆಂಟೆಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಜುಲೈ 12 ರಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡು ಟೆಸ್ಟ್ ಸರಣಿಯ ಮೊದಲ ಟೆಸ್ಟ್ನಲ್ಲಿ ಇಶಾಂತ್ ಕಾಮೆಂಟರಿ ಮಾಡುವುದನ್ನು ಕಾಣಬಹುದಾಗಿದೆ. ಈ ಬಲಗೈ ವೇಗದ ಬೌಲರ್ ಜಿಯೋ ಸಿನಿಮಾದಲ್ಲಿ ಕಾಮೆಂಟರಿ ಮಾಡಲಿದ್ದಾರೆ. ಸದ್ಯ ಇಶಾಂತ್ ಶರ್ಮಾ ಟೀಂ ಇಂಡಿಯಾದಿಂದ ಹೊರಗುಳಿದಿದ್ದು, ಸದ್ಯದಲ್ಲೇ ನಿವೃತ್ತಿಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಈ ವರದಿಯ ನಡುವೆ, ಇಶಾಂತ್ ಶರ್ಮಾ ಕಾಮೆಂಟೇಟರ್ ಆಗಿ ಹೊಸ ಪಾತ್ರವನ್ನು ತೆಗೆದುಕೊಳ್ಳಲು ತಯಾರಿ ನಡೆಸಿದ್ದು, ಎಲ್ಲರಿಗೂ ಶಾಕ್ ನೀಡಿದ್ದಾರೆ. ಇಶಾಂತ್ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗದೆ ಕಾಮೆಂಟರಿ ಮಾಡುವುದನ್ನು ನಾವು ವಿಂಡೀಸ್ ಸರಣಿಯಲ್ಲಿ ಕಾಣಬಹುದಾಗಿದೆ.
ಇದಕ್ಕೂ ಮೊದಲು, ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ನಿವೃತ್ತಿಯ ಮೊದಲು ಹಲವಾರು ಸರಣಿಗಳಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಂಡಿದ್ದಾರೆ. ಅದಾಗ್ಯೂ ಕಾರ್ತಿಕ್ ಐಪಿಎಲ್ನಲ್ಲಿ ಅಬ್ಬರಿಸಿ, ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಇಶಾಂತ್ ಶರ್ಮಾ ಭಾರತ ಪರ 105 ಟೆಸ್ಟ್ ಪಂದ್ಯಗಳಲ್ಲಿ 311 ವಿಕೆಟ್ ಪಡೆದಿದ್ದರೆ, 80 ಏಕದಿನ ಪಂದ್ಯಗಳಲ್ಲಿ 115 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಭಾರತದ ಪರ 14 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ iಶಾಂತ್ 8 ವಿಕೆಟ್ ಪಡೆದಿದ್ದಾರೆ. ಇಶಾಂತ್ ಶರ್ಮಾ ಐಪಿಎಲ್ನಲ್ಲಿ ಇದುವರೆಗೆ 101 ಪಂದ್ಯಗಳನ್ನು ಆಡಿದ್ದು, 35.05 ಸರಾಸರಿಯಲ್ಲಿ 83 ವಿಕೆಟ್ಗಳನ್ನು ಪಡೆದಿದ್ದಾರೆ.