ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ 353 ರನ್ ಕಲೆಹಾಕಿದ ಇಂಗ್ಲೆಂಡ್, ಬೌಲಿಂಗ್ನಲ್ಲೂ ಪರಾಕ್ರಮ ಮೆರೆದಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 7 ವಿಕೆಟ್ ಕಳೆದುಕೊಂಡು 219 ರನ್ ಕಲೆಹಾಕಿದೆ. 134 ರನ್‌ಗಳ ಹಿನ್ನಡೆಯಲ್ಲಿದೆ.
ಧ್ರುವ್ ಜುರೆಲ್ 58 ಎಸೆತಗಳಲ್ಲಿ 30 ರನ್ ಗಳಿಸಿ ತಂಡಕ್ಕೆ ಆಸರೆಯಾದರೆ, ಕುಲ್ದೀಪ್ ಯಾದವ್ 72 ಎಸೆತಗಳಲ್ಲಿ 17 ರನ್ ಗಳಿಸಿ ಧ್ರುವ್ಗೆ ಸಾಥ್ ನೀಡುತ್ತಿದ್ದಾರೆ. ಟೀಮ್ ಇಂಡಿಯಾ ಆದಷ್ಟು ತನ್ನ ಹಿನ್ನಡೆಯನ್ನು ಕಡಿಮೆ ಮಾಡುವತ್ತ ಚಿನ್ನ ನೆಟ್ಟಿದೆ. ಹೀಗಾಗಿ ಇಂದಿನ ಮೂರನೇ ದಿನದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ನೀಡಿದ 353 ರನ್ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ರೋಹಿತ್ ಶರ್ಮಾ ಕೇವಲ 2 ರನ್ ಗಳಿಸಿ ಔಟಾಗುವ ಮೂಲಕ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ನಂತರ ಜೊತೆಯಾದ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಎರಡನೇ ವಿಕೆಟ್‌ಗೆ 82 ರನ್‌ಗಳ ಜೊತೆಯಾಟ ನೀಡಿದರು.
ಚೆನ್ನಾಗಿಯೆ ಆಡುತ್ತಿದ್ದ ಶುಭ್ಮನ್ ಗಿಲ್ 38 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಸತತ ವೈಫಲ್ಯ ಅನುಭವಿಸಿರುವ ರಜತ್ ಪಾಟಿದರ್ ಕೇವಲ 17 ರನ್ಗಳಿಗೆ ಸುಸ್ತಾದರು. ಆದರೆ ಔಟಾಗುವುದಕ್ಕೂ ಮುನ್ನ ಯಶಸ್ವಿಗೆ ಉತ್ತಮ ಸಾಥ್ ನೀಡಿದ್ದರಿಂದ ಜೈಸ್ವಾಲ್ ಅರ್ಧಶತಕ ಪೂರ್ಣಗೊಳಿಸಿದರು.
ರಜತ್ ಪಾಟಿದಾರ್ ವಿಕೆಟ್ ಬಳಿಕ ಬಂದ ರವೀಂದ್ರ ಜಡೇಜಾ 12 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರೆ, ಸರ್ಫರಾಜ್ ಖಾನ್ ಕೇವಲ 14 ರನ್ಗಳಿಗೆ ಸುಸ್ತಾದರು. ಅದಕ್ಕೂ ಮುನ್ನ 73 ರನ್ ಕಲೆಹಾಕಿ ಮತ್ತೊಂದು ಶತಕ ಸಿಡಿಸುವ ಸುಳಿವು ನೀಡಿದ್ದ ಯಶಸ್ವಿ ಅವರನ್ನು ಔಟ್ ಮಾಡುವ ಮೂಲಕ ಇಂಗ್ಲೆಂಡ್ ದೊಡ್ಡ ವಿಕೆಟ್ ಪಡೆಯಿತು.
ಆರ್ ಅಶ್ವಿನ್ ಕೂಡ ಬೇಗನೇ ಔಟಾದರು. ಜೈಸ್ವಾಲ್ ಬಿಟ್ಟರೆ ಮತ್ಯಾರಿಂದಲೂ ದೊಡ್ಡ ಇನ್ನಿಂಗ್ಸ್ ಬರಲಿಲ್ಲ. ಎಲ್ಲರೂ ನಿರಾಸೆ ಮೂಡಿಸಿದರು. ಆ ಬಳಿಕ ಧ್ರುವ್ ಜುರೆಲ್ ಹಾಗೂ ಕುಲ್ದೀಪ್ ಯಾದವ್ ಟೀಮ್ ಇಂಡಿಯಾ ಇನ್ನಿಂಗ್ಸ್ ನಿಭಾಯಿಸಿದರು. ಧ್ರುವ್ ಮತ್ತು ಕುಲ್ದೀಪ್ ಎರಡನೆ ದಿನದಾಟದ ಅಂತ್ಯದವರೆಗೆ ಎಂಟನೇ ವಿಕೆಟ್‌ಗೆ 42 ರನ್‌ಗಳ ಅಜೇಯ ಜೊತೆಯಾಟ ನಡೆಸಿದರು. ಇಂಗ್ಲೆಂಡ್ ಪರ ಶೋಯೆಬ್ ಬಶೀರ್ 4 ವಿಕೆಟ್ ಪಡೆದಿದ್ದಾರೆ.