
ಹ್ಯಾಮಿಲ್ಟನ್ನ ಸೀಡನ್ ಪಾರ್ಕ್ನಲ್ಲಿ ನಡೆಯುತ್ತಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ದ್ವಿತೀಯ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಓವರ್ ಕಡಿತಗೊಳಿಸಿ 29 ಓವರ್ಗಳ ಪಂದ್ಯವನ್ನು ನಿಗದಿ ಪಡಿಸಿದರೂ ಒಂದು ಇನ್ನಿಂಗ್ಸ್ ಕೂಡ ಪೂರ್ಣಗೊಳ್ಳದೆ ಪಂದ್ಯವನ್ನು ಸ್ಥಗಿತ ಮಾಡಲಾಯಿತು.

ಪಂದ್ಯ ಆರಂಭಕ್ಕೂ ಮುನ್ನ ಟಾಸ್ ಪ್ರಕ್ರಿಯೆಗೇ ವರುಣ ಅಡ್ಡಿ ಪಡಿಸಿದ. ಬಳಿಕ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗೆ ಇಳಿದ ಟೀಮ್ ಇಂಡಿಯಾ ಪರ ಓಪನರ್ಗಳಾದ ನಾಯಕ ಶಿಖರ್ ಧವನ್ ಹಾಗೂ ಶುಭ್ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು.

ಆದರೆ, 4.5 ಓವರ್ಗೆ ಭಾರತ ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿದ್ದಾಗ ಮಳೆ ಪುನಃ ಶುರುವಾಯಿತು. ಕೆಲ ಸಮಯ ಕಾದರೂ ಮಳೆ ಕಡಿಮೆ ಆಗಲಿಲ್ಲ. ಬಳಿಕ ಓವರ್ ಕಡಿತದ ಪ್ರಕ್ರಿಯೆ ಶುರುವಾಯಿತು. ಹೀಗಾಗಿ 29 ಓವರ್ಗಳ ಪಂದ್ಯವನ್ನ ಆಡಿಸಲು ನಿರ್ಧಾರ ಮಾಡಲಾಯಿತು.

ಮಳೆ ನಿತ್ತ ಬಳಿಕ ಬ್ಯಾಟಿಂಗ್ ಮುಂಂದುವರೆಸಲು ಬಂದ ಭಾರತ 6ನೇ ಓವರ್ನ ಮ್ಯಾಟ್ ಹೆನ್ರಿ ಅವರ ಮೊದಲ ಎಸೆತದಲ್ಲೇ ಶಿಖರ್ ಧವನ್ (3) ವಿಕೆಟ್ ಕಳೆದುಕೊಂಡಿತು. ನಂತರ ಜೊತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ಶುಭ್ಮನ್ ಗಿಲ್ ಬಿರುಸಿನ ಆಟ ಆಡಿದರು.

ಆದರೆ, ಮಳೆಯ ಆಟದ ಮುಂದೆ ಸೂರ್ಯನ ಸ್ಫೋಟಕ ಆಟ ನಿಂತು ಹೋಯಿತು. 13ನೇ ಓವರ್ ಆಗುವಾಗ ಮತ್ತೆ ಜೋರಾಗಿ ಮಳೆ ಸುರಿದ ಪರಿಣಾಮ ಆಟಗಾರರೆಲ್ಲ ಪೆವಿಲಿಯನ್ಗೆ ತೆರಳಿದರು. ಈ ಸಂದರ್ಭ ಭಾರತ 12.5 ಓವರ್ಗೆ 1 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತ್ತು. ಸೂರ್ಯ 25 ಎಸೆತಗಳಲ್ಲಿ 3 ಸಿಕ್ಸರ್, 2 ಫೋರ್ನೊಂದಿಗೆ ಅಜೇಯ 34 ಮತ್ತು ಗಿಲ್ 42 ಎಸೆತಗಳಲ್ಲಿ ಅಜೇಯ 45 ರನ್ ಸಿಡಿಸಿದ್ದರು.

ನಂತರ ಕೆಲಹೊತ್ತು ಕಾದರೂ ಮಳೆ ಕಡಿಮೆ ಆಗಲಿಲ್ಲ. ಅಂತಿಮವಾಗಿ ಉಭಯ ತಂಡಗಳ ನಾಯಕ ಹಾಗೂ ಕೋಚ್ ಜೊತೆ ಚರ್ಚಿಸಿ ಅಂಪೈರ್ಗಳು ಪಂದ್ಯವನ್ನು ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬಂದರು. ಈ ಮೂಲಕ ಭಾರತ ಏಕದಿನ ಸರಣಿ ಗೆಲ್ಲುವ ಕನಸು ನುಚ್ಚುನೂರಾಗಿದೆ.

ಮಳೆಯ ನಡುವೆಯೇ ಪಂದ್ಯದ ಆರಂಭಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳ ಫೊಟೋ.

ಮಳೆ ಬಂದ ಕಾರಣ ಪಿಚ್ ಅನ್ನು ಕವರ್ ಮಾಡುತ್ತಿರುವ ಗ್ರೌಂಡ್ಸ್ ಮೆನ್ಗಳು.