
2026 ರ ಟಿ 20 ವಿಶ್ವಕಪ್ ಕೇವಲ ಎರಡು ತಿಂಗಳು ದೂರದಲ್ಲಿದೆ. ಆದರೆ ಹಾಲಿ ಚಾಂಪಿಯನ್ ಟೀಂ ಇಂಡಿಯಾ ಮಾತ್ರ ಈ ಮಿನಿ ವಿಶ್ವಸಮರಕ್ಕೆ ಇನ್ನು ಸಿದ್ಧವಾಗಿಲ್ಲ ಎಂದು ತೋರುತ್ತಿದೆ. ಹೀಗೆ ಹೇಳಲು ಕಾರಣ ತಂಡದ ನಾಯಕ ಸೂರ್ಯಕುಮಾರ್ ಯಾದವ್. ಭಾರತ ಟಿ20 ತಂಡದ ನಾಯಕತ್ವವಹಿಸಿಕೊಂಡ ಬಳಿಕ ಸೂರ್ಯಕುಮಾರ್ ಯಾದವ್ ಅವರ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ಇದು ತಂಡಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಕಳಪೆ ಪ್ರದರ್ಶನ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಯಾದವ್ ಅವರ ಇತ್ತೀಚಿನ ಪ್ರದರ್ಶನವು ಅವರ ನಾಯಕತ್ವದ ಬಗ್ಗೆ ಮಾತ್ರವಲ್ಲದೆ ತಂಡದಲ್ಲಿ ಅವರ ಸ್ಥಾನದ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯು ಡಿಸೆಂಬರ್ 9, ಮಂಗಳವಾರ ಕಟಕ್‌ನ ಬಾರಾಬತಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಾರಂಭವಾಯಿತು. ಆದಾಗ್ಯೂ, ಮೊದಲ ಪಂದ್ಯದಲ್ಲಿಯೇ ಟೀಂ ಇಂಡಿಯಾದ ಅಗ್ರ ಕ್ರಮಾಂಕ ಸಪ್ಪೆ ಪ್ರದರ್ಶನ ನೀಡಿದೆ. ತಂಡಕ್ಕೆ ಮರಳಿದ ಉಪನಾಯಕ ಶುಭ್ಮನ್ ಗಿಲ್ ಮೊದಲ ಓವರ್‌ನಲ್ಲಿಯೇ ಔಟಾದರು.

ಉಪನಾಯಕ ಗಿಲ್ ಔಟಾದ ನಂತರ ಕ್ರೀಸ್‌ಗೆ ಬಂದ ನಾಯಕ ಸೂರ್ಯಕುಮಾರ್ ಯಾದವ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವು. ಏಕೆಂದರೆ ಈ ಇಡೀ ವರ್ಷ ಸೂರ್ಯ ಅವರ ಬ್ಯಾಟ್ನಿಂದ ಯಾವುದೇ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಬಂದಿರಲಿಲ್ಲ. ಆದರೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅವರ ಇತ್ತೀಚಿನ ಪ್ರದರ್ಶನವು ಫಾರ್ಮ್‌ಗೆ ಮರಳುವ ಭರವಸೆಯನ್ನು ಹುಟ್ಟುಹಾಕಿತ್ತು.

ಮೊದಲ ವಿಕೆಟ್ ಬೇಗನೆ ಕಳೆದುಕೊಂಡ ನಂತರ ನಾಯಕ ಸೂರ್ಯ ದೊಡ್ಡ ಇನ್ನಿಂಗ್ಸ್ ಆಡುತ್ತಾರೆಂದು ನಿರೀಕ್ಷಿಸಲಾಗಿತ್ತು, ಆದರೆ ಅವರು ಕ್ರೀಸ್‌ಗೆ ಬಂದ ಕ್ಷಣದಿಂದಲೇ ರನ್ಗಳಿಸಲು ಕಷ್ಟಪಟ್ಟರು. ಇದರ ಫಲವಾಗಿ ಸೂರ್ಯ ತಮ್ಮ ಮೊದಲ ಎಂಟು ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಿದರು. ಆದಾಗ್ಯೂ ಮೂರನೇ ಓವರ್‌ನಲ್ಲಿ ಲುಂಗಿ ಎನ್‌ಗಿಡಿ ಅವರ ಸತತ ಎಸೆತಗಳಲ್ಲಿ ಸೂರ್ಯ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಆದರೆ ಮುಂದಿನ ಎಸೆತದಲ್ಲೇ ಸುಲಭ ಕ್ಯಾಚ್ ನೀಡಿ ಔಟಾದರು. ಸೂರ್ಯ 11 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ ಔಟಾದರು.

ವಾಸ್ತವವಾಗಿ ಸೂರ್ಯಕುಮಾರ್ ಯಾದವ್ ಈ ವರ್ಷ ಅಗ್ಗವಾಗಿ ಔಟ್ ಆಗುತ್ತಿರುವುದು ಇದೇ ಮೊದಲಲ್ಲ. 2025 ರಲ್ಲಿ ಅವರ ಬ್ಯಾಟ್ ಒಂದೇ ಒಂದು ಅರ್ಧಶತಕ ಗಳಿಸಿಲ್ಲ. ಈ ವರ್ಷ 18 ಟಿ20 ಪಂದ್ಯಗಳನ್ನಾಡಿರುವ ಸೂರ್ಯ 15.07 ರ ಸರಾಸರಿಯಲ್ಲಿ ಕೇವಲ 196 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಸ್ಟ್ರೈಕ್ ರೇಟ್ ಕೇವಲ 126 ಆಗಿದೆ.
Published On - 8:33 pm, Tue, 9 December 25