
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ಇಂಡೋ-ವಿಂಡೀಸ್ ದ್ವಿತೀಯ ಟೆಸ್ಟ್ ಪಂದ್ಯ ಶುರುವಾಗಲಿದೆ.

ಡೊಮಿನಿಕಾದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 141 ರನ್ಗಳ ಇನ್ನಿಂಗ್ಸ್ ಜಯ ಸಾಧಿಸಿತ್ತು. ಹೀಗಾಗಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ವಿಶೇಷ ಎಂದರೆ ಇದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ 100ನೇ ಟೆಸ್ಟ್ ಪಂದ್ಯವಾಗಿದೆ. ಆದರೆ, ಈ ಟೆಸ್ಟ್ಗೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹವಾಮಾನ ವರದಿ ಏನು ಹೇಳುತ್ತಿದೆ ಎಂಬುದನ್ನು ನೋಡೋಣ.

ಪೋರ್ಟ್ ಆಫ್ ಸ್ಪೇನ್ನಲ್ಲಿ ಬಿಸಿಲಿನ ಲಕ್ಷಣ ಕಾಣಿಸುತ್ತಿಲ್ಲ. ಟೆಸ್ಟ್ ಪಂದ್ಯದ ಎಲ್ಲಾ ಐದು ದಿನಗಳು ಕೂಡ ಮೋಡ ಕವಿದ ವಾತಾವರಣ ಇರಲಿದ್ದು, ಮಳೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

weather.com ಪ್ರಕಾರ, ಪಂದ್ಯದ ಐದು ದಿನಗಳಲ್ಲಿ ಶೇ. 52 ರಷ್ಟು, ಶೇ. 49 ರಷ್ಟು, ಶೇ. 51 ರಷ್ಟು, ಶೇ. 47 ರಷ್ಟು, ಮತ್ತು ಶೇ. 41 ರಷ್ಟು ಮಳೆ ಬೀಳಲಿದೆ. ಪಂದ್ಯ ನಡೆಯುವ ಸಂಪೂರ್ಣ ಐದು ದಿನಗಳ ಅವಧಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹೇಳಲಾಗಿದೆ.

ಪಿಚ್ ಬಗ್ಗೆ ನೋಡುವುದಾದರೆ, ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಮೊದಲ ಎರಡು ಇನ್ನಿಂಗ್ಸ್‌ಗಳಲ್ಲಿ ಬ್ಯಾಟರ್‌ಗಳು ಯಶಸ್ಸು ಸಾಧಿಸಲಿದ್ದಾರೆ. ಆದರೆ, ಪಂದ್ಯವು ಮುಂದುವರೆದಂತೆ ಪಿಚ್ ನಿಧಾನವಾಗುತ್ತದೆ. ವೇಗಿಗಳು ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡುವುದನ್ನು ಆನಂದಿಸಬಹುದು.

ಈ ಪಿಚ್ನಲ್ಲಿ ಅಂತಿಮ ಎರಡು ದಿನಗಳಲ್ಲಿ ಸ್ಪಿನ್ನರ್‌ಗಳು ಪರಿಣಾಮಕಾರಿ ಆಗಲಿದ್ದಾರೆ. ಇಲ್ಲಿ ಆಡಿದ 61 ಟೆಸ್ಟ್‌ಗಳಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ತಂಡವು 20 ಪಂದ್ಯಗಳನ್ನು ಗೆದ್ದಿದೆ, ಚೇಸಿಂಗ್ ತಂಡವು 18 ರಲ್ಲಿ ವಿಜಯಶಾಲಿಯಾಗಿದೆ. ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 300 ಕ್ಕಿಂತ ಅಧಿಕವಿದೆ.