
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಭಾರತ ತಂಡದಿಂದ ಹೊರಬಿದ್ದು ವರ್ಷಗಳು ಕಳೆದಿವೆ. ಇದಾಗ್ಯೂ ಯುವ ದಾಂಡಿಗನ ಕಂಬ್ಯಾಕ್ ಪ್ರಯತ್ನ ಮುಂದುವರೆದಿದೆ. ಅದರ ಭಾಗವಾಗಿ ಇದೀಗ ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ನಲ್ಲಿ ಇಶಾನ್ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಅದು ಸಹ ಖ್ಯಾತ ಕ್ಲಬ್ ನಾಟಿಂಗ್‌ಹ್ಯಾಮ್‌ಶೈರ್ ಪರ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ.

ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಒನ್ 2025 ರ 40ನೇ ಪಂದ್ಯದ ಮೂಲಕ ಇಶಾನ್ ಕಿಶನ್ ನಾಟಿಂಗ್‌ಹ್ಯಾಮ್‌ಶೈರ್ ಪರ ಪಾದಾರ್ಪಣೆ ಮಾಡಿದ್ದಾರೆ. ಯಾರ್ಕ್ಶೈರ್ ವಿರುದ್ಧದ ಈ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿರುವ ಇಶಾನ್ ಮೊದಲ ಇನಿಂಗ್ಸ್ನಲ್ಲಿ 53 ಎಸೆತಗಳಲ್ಲಿ 6 ಫೋರ್ಗಳೊಂದಿಗೆ ಅಜೇಯ 44 ರನ್ ಕಲೆಹಾಕಿದ್ದಾರೆ.

ಇಶಾನ್ ಕಿಶನ್ ಅವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಾಟಿಂಗ್‌ಹ್ಯಾಮ್‌ಶೈರ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಇಶಾನ್ ಕಿಶನ್ ಹಾಗೂ ಲಿಯಾಮ್ ಪೀಟರ್ಸನ್ ಬ್ಯಾಟಿಂಗ್ ಕಾಯ್ದುಕೊಂಡಿದ್ದು, 2ನೇ ದಿನದಾಟಲ್ಲಿ ಬ್ಯಾಟಿಂಗ್ ಮುಂದುವರೆಸಲಿದ್ದಾರೆ.

ಇಶಾನ್ ಕಿಶನ್ ಟೀಮ್ ಇಂಡಿಯಾ ಪರ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು 2023 ರಲ್ಲಿ. 2023ರ ಏಕದಿನ ವಿಶ್ವಕಪ್ ಬಳಿಕ ಅಶಿಸ್ತಿನ ಕಾರಣ ಭಾರತ ತಂಡದಿಂದ ಹೊರಬಿದ್ದಿದ್ದ ಯುವ ದಾಂಡಿಗನಿಗೆ ಮತ್ತೆ ಅವಕಾಶ ಸಿಕ್ಕಿಲ್ಲ. ಇದೀಗ ಇಂಗ್ಲೆಂಡ್ನಲ್ಲಿ ಕೌಂಟಿ ಪಂದ್ಯಗಳನ್ನಾಡುವ ಮೂಲಕ ಮತ್ತೊಮ್ಮೆ ಟೀಮ್ ಇಂಡಿಯಾದ ಕದ ತಟ್ಟುವ ವಿಶ್ವಾಸದಲ್ಲಿದ್ದಾರೆ.

ಅಂದಹಾಗೆ ಇಶಾನ್ ಕಿಶನ್ ಈವರೆಗೆ ಭಾರತದ ಪರ 2 ಟೆಸ್ಟ್, 27 ಏಕದಿನ ಹಾಗೂ 32 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಟೆಸ್ಟ್ನಲ್ಲಿ 78 ರನ್ ಕಲೆಹಾಕಿದರೆ, ಏಕದಿನ ಕ್ರಿಕೆಟ್ನಲ್ಲಿ 933 ರನ್ ಗಳಿಸಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್ನಲ್ಲಿ 796 ರನ್ ಬಾರಿಸಿದ್ದಾರೆ. ಇದೀಗ ಕೌಂಟಿ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿರುವ ಇಶಾನ್ ಕಿಶನ್ ವಿದೇಶಿ ನೆಲದಲ್ಲಿ ಮಿಂಚಿದರೆ, ಮುಂಬರುವ ದಿನಗಳಲ್ಲಿ ಭಾರತ ತಂಡಲ್ಲಿ ಎದುರು ನೋಡಬಹುದು.