
ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋಸ್ ಬಟ್ಲರ್ (Jos Buttler) ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಅದು ಸಹ ಇಂಗ್ಲೆಂಡ್ ಪರ ಅತ್ಯಧಿಕ ಪಂದ್ಯಗಳನ್ನಾಡುವ ಮೂಲಕ. ಈ ಮೂಲಕ ಆಂಗ್ಲರ ಪರ ಬಟ್ಲರ್ ಹೊಸ ದಾಖಲೆ ನಿರ್ಮಿಸಿದ್ದಾರೆ.

ಪಲ್ಲೆಕೆಲ್ಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಜೋಸ್ ಬಟ್ಲರ್ ಇಂಗ್ಲೆಂಡ್ ಪತ ಅತ್ಯಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಜೇಮ್ಸ್ ಅ್ಯಂಡರ್ಸನ್ ಹೆಸರಿನಲ್ಲಿತ್ತು.

2002 ರಲ್ಲಿ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದ ಜೇಮ್ಸ್ ಅ್ಯಂಡರ್ಸನ್ ಇಂಗ್ಲೆಂಡ್ ಪರ ಬರೋಬ್ಬರಿ 401 ಪಂದ್ಯಗಳನ್ನಾಡಿದ್ದರು. ಈ ಮೂಲಕ ಆಂಗ್ಲರ ಪರ 400 ಕ್ಕಿಂತ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಏಕೈಕ ಆಟಗಾರನಾಗಿ ಹೊರಹೊಮ್ಮಿದ್ದರು.

ಇದೀಗ ಈ ದಾಖಲೆ ಮುರಿಯುವಲ್ಲಿ ಜೋಸ್ ಬಟ್ಲರ್ ಯಶಸ್ವಿಯಾಗಿದ್ದಾರೆ. 2011 ರಿಂದ ಇಂಟರ್ನ್ಯಾಷನಲ್ ಮ್ಯಾಚ್ ಆಡುತ್ತಿರುವ ಬಟ್ಲರ್ ಈವರೆಗೆ 402* ಪಂದ್ಯಗಳನ್ನಾಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ಪರ ಅತ್ಯಧಿಕ ಅಂತಾರಾಷ್ಟ್ರೀಯ ಮ್ಯಾಚ್ಗಳನ್ನಾಡಿದ ಆಟಗಾರ ಎನಿಸಿಕೊಂಡಿದ್ದಾರೆ.

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ವಿಶ್ವ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಟೀಮ್ ಇಂಡಿಯಾ ಪರ ಒಟ್ಟು 664 ಪಂದ್ಯಗಳನ್ನಾಡುವ ಮೂಲಕ ಸಚಿನ್ ಈ ದಾಖಲೆ ನಿರ್ಮಿಸಿದ್ದಾರೆ. ಇದೀಗ 402 ಪಂದ್ಯಗಳೊಂದಿಗೆ ನಾಟೌಟ್ ಆಗಿರುವ ಬಟ್ಲರ್ ಮುಂದಿನ ವರ್ಷದವರೆಗೆ ಅಂತಾರಾಷ್ಟ್ರೀಯ ಕೆರಿಯರ್ ಮುಂದುವರೆಸಬಹುದು. ಈ ಮೂಲಕ ಅವರು 450 ಕ್ಕಿಂತ ಹೆಚ್ಚಿನ ಪಂದ್ಯಗಳೊಂದಿಗೆ ಕೆರಿಯರ್ ಅಂತ್ಯಗೊಳಿಸುವ ನಿರೀಕ್ಷೆಯಿದೆ.