
ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ಬರೆದವರು ಬಾಂಗ್ಲಾದೇಶ್ ತಂಡದ ಯುವ ಆಲ್ರೌಂಡರ್ ಮೆಹಿದಿ ಹಸನ್ ಮಿರಾಝ್. ಚಟ್ಟೋಗ್ರಾಮ್ನಲ್ಲಿ ನಡೆಯುತ್ತಿರುವ ಝಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ನೀಡುವ ಮೂಲಕ ಮಿರಾಝ್ ಈ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ತಂಡವು ಮೊದಲ ಇನಿಂಗ್ಸ್ನಲ್ಲಿ 227 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಪರ ಮೆಹಿದಿ ಹಸನ್ ಮಿರಾಝ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. 162 ಎಸೆತಗಳನ್ನು ಎದುರಿಸಿದ ಮೆಹಿದಿ, 1 ಸಿಕ್ಸ್ 11 ಫೋರ್ಗಳೊಂದಿಗೆ ಮೂರನೇ ದಿನದಾಟದಲ್ಲಿ ಶತಕ ಪೂರೈಸಿದರು. ಈ ಮೂಲಕ ಬಾಂಗ್ಲಾದೇಶ್ ತಂಡದ ಸ್ಕೋರ್ ಅನ್ನು 444 ಕ್ಕೆ ತಂದು ನಿಲ್ಲಿಸಿದರು.

ಬಾಂಗ್ಲಾದೇಶ್ ತಂಡವು 444 ರನ್ಗಳಿಗೆ ಆಲೌಟ್ ಆದ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಆರಂಭಿಸಿದ ಝಿಂಬಾಬ್ವೆ ತಂಡವು ಕೇವಲ 111 ರನ್ಗಳಿಗೆ ಆಲೌಟ್ ಆಯಿತು. ಬಾಂಗ್ಲಾದೇಶ್ ಪರ ಮೆಹಿದಿ ಹಸನ್ ಮಿರಾಝ್ 5 ವಿಕೆಟ್ ಕಬಳಿಸಿ ಮಿಂಚಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಕೂಡ ನಿರ್ಮಾಣವಾಯಿತು.

ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ದಿನ ಶತಕ ಪೂರೈಸಿ, 5 ವಿಕೆಟ್ ಕಬಳಿಸಿದ ಏಷ್ಯಾದ ಮೊದಲ ಆಟಗಾರ ಹಾಗೂ ವಿಶ್ವದ 2ನೇ ಆಲ್ರೌಂಡರ್ ಎಂಬ ಹೆಗ್ಗಳಿಕೆಯನ್ನು ಮೆಹಿದಿ ಹಸನ್ ಮಿರಾಝ್ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಇಂತಹದೊಂದು ಸಾಧನೆ ಮಾಡಿದ್ದು ಇಂಗ್ಲೆಂಡ್ನ ಇಯಾನ್ ಬಾಥಮ್.

1984 ರಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಇಯಾನ್ ಬಾಥಮ್ ಒಂದೇ ದಿನ ಶತಕ ಪೂರೈಸಿ, ಅದೇ ದಿನ 5 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ 41 ವರ್ಷಗಳ ಬಳಿಕ ಈ ದಾಖಲೆಯನ್ನು ಸರಿಗಟ್ಟುವಲ್ಲಿ ಮೆಹಿದಿ ಹಸನ್ ಮಿರಾಝ್ ಯಶಸ್ವಿಯಾಗಿದ್ದಾರೆ.

ಝಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂರನೇ ದಿನ ಶತಕ ಪೂರೈಸಿದ ಮೆಹಿದಿ ಹಸನ್ (104) , ಅದೇ ದಿನ 21 ಓವರ್ಗಳಲ್ಲಿ ಕೇವಲ 32 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಮೆಹಿದಿ ಹಸನ್ ಮಿರಾಝ್ ಅಪರೂಪದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.