
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc) ವಿಶೇಷ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ದಿ ಲೆಜೆಂಡ್ ಮುತ್ತಯ್ಯ ಮುರಳೀಧರನ್ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಲಾರ್ಡ್ಸ್ ಮೈದಾನದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮಿಚೆಲ್ ಸ್ಟಾರ್ಕ್ 2 ವಿಕೆಟ್ ಕಬಳಿಸಿದ್ದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಮೂರು ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ನಿರ್ಣಾಯಕ ಪಂದ್ಯದಲ್ಲಿ ಸ್ಟಾರ್ಕ್ 5 ವಿಕೆಟ್ ಕಬಳಿಸಿ ಮಿಂಚಿದ್ದರು.

ಈ ಐದು ವಿಕೆಟ್ಗಳೊಂದಿಗೆ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಎಂಬ ವಿಶ್ವ ದಾಖಲೆಯನ್ನು ಮಿಚೆಲ್ ಸ್ಟಾರ್ಕ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ಶ್ರೇಷ್ಠ ದಾಖಲೆ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರ ಹೆಸರಿನಲ್ಲಿತ್ತು.

ಮುತ್ತಯ್ಯ ಮುರಳೀಧರನ್ ಐಸಿಸಿ ಟೂರ್ನಿಗಳಲ್ಲಿ ಒಟ್ಟು 15 ನಾಕೌಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 23 ವಿಕೆಟ್ ಕಬಳಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಯಶಸ್ವಿಯಾಗಿದ್ದಾರೆ.

ಮಿಚೆಲ್ ಸ್ಟಾರ್ಕ್ ಐಸಿಸಿ ಟೂರ್ನಿಗಳಲ್ಲಿ ಒಟ್ಟು 13 ನಾಕೌಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಪಡೆದಿರುವುದು ಬರೋಬ್ಬರಿ 25 ವಿಕೆಟ್ಗಳು. ಈ ಮೂಲಕ ಐಸಿಸಿ ಟೂರ್ನಿಯ ನಾಕೌಟ್ ಮ್ಯಾಚ್ಗಳಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎಂಬ ವಿಶ್ವ ದಾಖಲೆಯನ್ನು ಸ್ಟಾರ್ಕ್ ಸ್ಪಾರ್ಕ್ ತಮ್ಮದಾಗಿಸಿಕೊಂಡಿದ್ದಾರೆ.