
ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಗಸ್ಟ್ ತಿಂಗಳ ಆಟಗಾರರ ಪ್ರಶಸ್ತಿ ರೇಸ್‌ನಲ್ಲಿ ಮೊಹಮ್ಮದ್ ಸಿರಾಜ್ ಅಲ್ಲದೆ ನ್ಯೂಜಿಲೆಂಡ್ನ ಮ್ಯಾಟ್ ಹೆನ್ರಿ ಹಾಗೂ ವೆಸ್ಟ್ ಇಂಡೀಸ್ನ ಜೇಡನ್ ಸೀಲ್ಸ್ ಕೂಡ ಇದ್ದರು. ಆದರೆ ಅವರಿಬ್ಬರನ್ನು ಹಿಂದಿಕ್ಕಿ ಈ ಪ್ರಶಸ್ತಿ ಪಡೆಯುವಲ್ಲಿ ಸಿರಾಜ್ ಯಶಸ್ವಿಯಾಗಿದ್ದಾರೆ.

ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಮೊಹಮ್ಮದ್ ಸಿರಾಜ್ ಪಾತ್ರ ಪ್ರಮುಖವಾಗಿತ್ತು. ಈ ಪ್ರವಾಸದಲ್ಲಿ ಆಡಿದ 5 ಟೆಸ್ಟ್‌ಗಳ 9 ಇನ್ನಿಂಗ್ಸ್‌ಗಳಲ್ಲಿ ಅವರು ಅತಿ ಹೆಚ್ಚು 23 ವಿಕೆಟ್‌ಗಳನ್ನು ಕಬಳಿಸಿದರು. ಹಾಗೆಯೇ ಎರಡು ಬಾರಿ 5 ವಿಕೆಟ್‌ಗಳು ಮತ್ತು ಒಮ್ಮೆ 4 ವಿಕೆಟ್‌ಗಳನ್ನು ಕಬಳಿಸಿದ ಸಾಧನೆ ಮಾಡಿದರು. ಒಟ್ಟಾರೆ 32.43 ರ ಸರಾಸರಿಯಲ್ಲಿ 23 ವಿಕೆಟ್‌ಗಳನ್ನು ಉರುಳಿಸಿದರು.

ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಸರಣಿಯಲ್ಲಿ ಸಿರಾಜ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಮಾತ್ರವಲ್ಲ. ಬದಲಾಗಿ, ಇಡೀ ಸರಣಿಯಲ್ಲಿ ಅತಿ ಹೆಚ್ಚು ಅಂದರೆ 1113 ಎಸೆತಗಳನ್ನು ಎಸೆದ ದಾಖಲೆಯನ್ನು ಸಿರಾಜ್ ನಿರ್ಮಿಸಿದ್ದರು. ಓವಲ್ ಟೆಸ್ಟ್‌ನಲ್ಲಿ ಅವರ ಸ್ಪೆಲ್ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಸರಳವಾಗಿ ಹೇಳುವುದಾದರೆ, ಆಗಸ್ಟ್‌ನಲ್ಲಿ ಅವರು ಆಡಿದ ಏಕೈಕ ಟೆಸ್ಟ್ ಇದಾಗಿದ್ದು, ಅದಕ್ಕಾಗಿಯೇ ಅವರು ತಿಂಗಳ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ.

ಓವಲ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಸಿರಾಜ್, 21.11 ಸರಾಸರಿಯಲ್ಲಿ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದರು. ಅವರ ಅದ್ಭುತ ಪ್ರದರ್ಶನವು ಟೀಂ ಇಂಡಿಯಾ ಆ ಟೆಸ್ಟ್ ಗೆಲ್ಲಲು ಮತ್ತು ಸರಣಿಯನ್ನು ಸಮಬಲಗೊಳಿಸಲು ಸಹಾಯ ಮಾಡಿತು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಎಲ್ಲಾ ಟೆಸ್ಟ್‌ಗಳನ್ನು ಆಡಿದ ಏಕೈಕ ಭಾರತೀಯ ವೇಗಿ ಮೊಹಮ್ಮದ್ ಸಿರಾಜ್.

ಆಗಸ್ಟ್ 2025 ರ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿ ಪಡೆದ ನಂತರ ಅಭಿಪ್ರಾಯ ಹಂಚಿಕೊಂಡಿರುವ ಸಿರಾಜ್, ‘ಈ ಪ್ರಶಸ್ತಿ ತಮಗೆ ತುಂಬಾ ವಿಶೇಷವಾಗಿದೆ. ಆಂಡರ್ಸನ್-ತೆಂಡೂಲ್ಕರ್ ಸರಣಿಯು ಬಹಳ ಸ್ಮರಣೀಯವಾಗಿತ್ತು, ಇದರಲ್ಲಿ ಎರಡೂ ತಂಡಗಳ ನಡುವೆ ಕಠಿಣ ಸ್ಪರ್ಧೆ ಇತ್ತು. ಈ ಪ್ರಶಸ್ತಿ ತನಗೆ ಎಷ್ಟು ಮುಖ್ಯವೋ, ಸಹಾಯಕ ಸಿಬ್ಬಂದಿ ಮತ್ತು ಇತರ ಆಟಗಾರರಿಗೂ ಅಷ್ಟೇ ಮುಖ್ಯ. ಇದು ನನ್ನ ಮೇಲಿನ ಅವರ ನಂಬಿಕೆಗೆ ಸಂದ ಜಯ. ಭಾರತೀಯ ಜೆರ್ಸಿಯಲ್ಲಿ ಯಾವಾಗಲೂ ನನ್ನ ಅತ್ಯುತ್ತಮ ಪ್ರದರ್ಶನ ನೀಡುವುದು ನನ್ನ ಉದ್ದೇಶ ಎಂದಿದ್ದಾರೆ.