
ಪಾಕಿಸ್ತಾನ್ ಮಹಿಳಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮುನೀಬಾ ಅಲಿ (Muneeba Ali) ಟಿ20 ಕ್ರಿಕೆಟ್ನಲ್ಲಿ 2ನೇ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ ಪಾಕ್ ತಂಡದ ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ ಅವರ ದಾಖಲೆಯನ್ನು ಮುರಿದಿದ್ದಾರೆ. ಬೆಲ್ಫಾಸ್ಟ್ನ ಸಿವಿಲ್ ಸರ್ವೀಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ್ ಮಹಿಳಾ ತಂಡ ಹಾಗೂ ಐರ್ಲೆಂಡ್ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ಪರ ಓರ್ಲಾ ಪ್ರೆಂಡರ್‌ಗ್ಯಾಸ್ಟ್ 46 ಎಸೆತಗಳಲ್ಲಿ 8 ಫೋರ್ಗಳೊಂದಿಗೆ ಅಜೇಯ 64 ರನ್ ಬಾರಿಸಿದರು. ಈ ಆಕರ್ಷಕ ಅರ್ಧಶತಕದ ನೆರವಿನೊಂದಿಗೆ ಐರ್ಲೆಂಡ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 155 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಪರ ಮುನೀಬಾ ಅಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕಳಾಗಿ ಕಣಕ್ಕಿಳಿದ ಮುನೀಬಾ ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು. ಈ ಮೂಲಕ 68 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 100 ರನ್ ಕಲೆಹಾಕಿದರು.

ಈ ಶತಕದೊಂದಿಗೆ ಪಾಕಿಸ್ತಾನ್ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ವಿಕೆಟ್ ಬ್ಯಾಟರ್ಗಳ ಪಟ್ಟಿಯಲ್ಲಿ ಮುನೀಬಾ ಅಲಿ ಮೊದಲ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಅಗ್ರಸ್ಥಾನದಲ್ಲಿ ಮೊಹಮ್ಮದ್ ರಿಝ್ವಾನ್ ಕಾಣಿಸಿಕೊಂಡಿದ್ದರು. ರಿಝ್ವಾನ್ ಟಿ20 ಕ್ರಿಕೆಟ್ನಲ್ಲಿ ಒಂದು ಸೆಂಚುರಿ ಈ ದಾಖಲೆ ನಿರ್ಮಿಸಿದ್ದರು.

ಇದೀಗ 2ನೇ ಟಿ20 ಸೆಂಚುರಿಯೊಂದಿಗೆ ಮುನೀಬಾ ಅಲಿ ಪಾಕ್ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಪಾಕಿಸ್ತಾನ್ ಪರ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಮೂರು ಶತಕ ಸಿಡಿಸಿರುವ ಬಾಬರ್ ಆಝಂ ಅಗ್ರಸ್ಥಾನದಲ್ಲಿದ್ದಾರೆ.