
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ನೋ ಬಾಲ್ ಎಸೆಯದೇ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ (Nathan Lyon) ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ಬರೋಬ್ಬರಿ 34,504 ಎಸೆತಗಳೊಂದಿಗೆ ಎಂಬುದು ವಿಶೇಷ. ಅಂದರೆ ಟೆಸ್ಟ್ ಕ್ರಿಕೆಟ್ನಲ್ಲಿ 34500+ ಎಸೆತಗಳನ್ನು ಎಸೆದು ಒಮ್ಮೆಯೂ ಗೆರೆ ದಾಟದೇ ಲಿಯಾನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

2011 ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಕೆರಿಯರ್ ಆರಂಭಿಸಿದ್ದ ನಾಥನ್ ಇದುವರೆಗೆ 5750 ಓವರ್ಗಳನ್ನು ಎಸೆದಿದ್ದಾರೆ. ಈ ವೇಳೆ ಒಮ್ಮೆಯೂ ಅವರು ಲೈನ್ ನೋ ಬಾಲ್ ಮಾಡಿಲ್ಲ ಎಂಬುದು ವಿಶೇಷ. ಅಲ್ಲದೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಒಂದು ನೋಬಾಲ್ ಎಸೆಯದೇ 100 ಟೆಸ್ಟ್ ಪಂದ್ಯವಾಡಿದ ಏಕೈಕ ಬೌಲರ್ ಎಂಬ ವಿಶ್ವ ದಾಖಲೆ ಕೂಡ ನಿರ್ಮಿಸಿದ್ದಾರೆ.

ಇದೀಗ ನೋ ಬಾಲ್ ಇಲ್ಲದೆ 34,504 ಎಸೆತಗಳನ್ನು ಪೂರೈಸುವ ಮೂಲಕ ನಾಥನ್ ಲಿಯಾನ್ ಹೊಸ ಮೈಲುಗಲ್ಲನ್ನು ದಾಟಿದ್ದಾರೆ. ಇನ್ನು ಈವರೆಗೆ 139 ಟೆಸ್ಟ್ ಪಂದ್ಯಗಳನ್ನಾಡಿರುವ ನಾಥನ್ ಲಿಯಾನ್ 34,504 ಎಸೆತಗಳಲ್ಲಿ 16942 ರನ್ ನೀಡಿದ್ದಾರೆ. ಈ ವೇಳೆ 562 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಅತ್ಯಧಿಕ ಟೆಸ್ಟ್ ವಿಕೆಟ್ ಪಡೆದ ವಿಶ್ವದ 7ನೇ ಬೌಲರ್ ಎನಿಸಿಕೊಂಡಿದ್ದಾರೆ.

ಹಾಗೆಯೇ ಟೆಸ್ಟ್ ಕ್ರಿಕೆಟ್ನಲ್ಲಿ ಶೇನ್ ವಾರ್ನ್ (708) ಬಳಿಕ ಅತೀ ಹೆಚ್ಚು ವಿಕೆಟ್ ಪಡೆದ ಆಸ್ಟ್ರೇಲಿಯಾ ಸ್ಪಿನ್ನರ್ ಎಂಬ ಹೆಗ್ಗಳಿಕೆಗೂ ನಾಥನ್ ಲಿಯಾನ್ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 5 ಸಾವಿರಕ್ಕೂ ಅಧಿಕ ಓವರ್ ಎಸೆದು ಒಂದೇ ಒಂದು ನೋ ಬಾಲ್ ಮಾಡದಿರುವುದು ಸರ್ವಶ್ರೇಷ್ಠ ಸಾಧನೆಯೇ ಸರಿ.

ಸದ್ಯ 27 ವರ್ಷದ ನಾಥನ್ ಲಿಯಾನ್ 2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡುವ ಕನಸು ಕಟ್ಟಿಕೊಂಡಿದ್ದಾರೆ. ಹೀಗಾಗಿ ಇನ್ನೂ ಎರಡು ವರ್ಷಗಳ ಕಾಲ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯುವುದು ಖಚಿತ. ಈ ಮೂಲಕ ತಮ್ಮ ವಿಕೆಟ್ಗಳ ಸಂಖ್ಯೆಯನ್ನು 600 ಕ್ಕೇರಿಸಲಿದ್ದಾರಾ ಕಾದು ನೋಡಬೇಕಿದೆ.