
ಪ್ರಸ್ತುತ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಪಾಕಿಸ್ತಾನದಲ್ಲಿ ಎರಡು ಟೆಸ್ಟ್‌ಗಳ ಸರಣಿ ನಡೆಯುತ್ತಿದೆ. ಉಭಯ ತಂಡಗಳ ನಡುವೆ ನಡೆದ ಮೊದಲ ಪಂದ್ಯವನ್ನು ಬಾಂಗ್ಲಾದೇಶ 10 ವಿಕೆಟ್‌ಗಳಿಂದ ಗೆದ್ದು ಇತಿಹಾಸ ನಿರ್ಮಿಸಿದೆ. ಇತ್ತ ತವರಿನಲ್ಲಿ ಸುಲಭವಾಗಿ ಗೆಲ್ಲುವ ಇರಾದೆಯಲ್ಲಿದ್ದ ಪಾಕ್ ತಂಡಕ್ಕೆ ಸೋಲಿನ ಆಘಾತವೇ ಎದುರಾಗಿತ್ತು. ಈ ನಡುವೆ ಎರಡೂ ತಂಡಗಳಿಗೆ ಐಸಿಸಿ ಬಿಗ್ ಶಾಕ್ ನೀಡಿದೆ.

ವಾಸ್ತವವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎರಡೂ ತಂಡಗಳು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಡಿಯಲ್ಲಿ ಟೆಸ್ಟ್ ಸರಣಿಯನ್ನು ಆಡುತ್ತಿವೆ. ಹೀಗಾಗಿ ಐಸಿಸಿ ಈ ಟೆಸ್ಟ್ ಸರಣಿಯ ಮೇಲೆ ತೀವ್ರ ನಿಗಾ ಇರಿಸಿದೆ. ಅದರಂತೆ ಸರಣಿಯಲ್ಲಿ ಸಣ್ಣದೊಂದು ತಪ್ಪಾದರೂ ಐಸಿಸಿ ತಕ್ಷಣವೇ ಶಿಕ್ಷೆಗೆ ಗುರಿಪಡಿಸುತ್ತದೆ.

ಅದರಂತೆ ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮೊದಲ ಟೆಸ್ಟ್‌ನಲ್ಲಿ ನಿಧಾನಗತಿಯ ಓವರ್‌ರೇಟ್‌ನಿಂದಾಗಿ ಉಭಯ ತಂಡಗಳಿಗೂ ಐಸಿಸಿ ಭಾರಿ ದಂಡ ವಿದಿಸಿದೆ. ಅದರಂತೆ ಆತಿಥೇಯ ಪಾಕಿಸ್ತಾನಕ್ಕೆ 6 ಅಂಕಗಳನ್ನು ಮತ್ತು ಬಾಂಗ್ಲಾದೇಶಕ್ಕೆ 3 ಅಂಕಗಳನ್ನು ಕಡಿತಗೊಳಿಸಿ ಐಸಿಸಿ ಆದೇಶ ನೀಡಿದೆ.

ಈಗಾಗಲೇ ಸೋತ ಶಾಕ್ನಲ್ಲಿದ್ದ ಪಾಕಿಸ್ತಾನಕ್ಕೆ ಇದು ನುಂಗಲಾರದ ತುತ್ತಾಗಿದೆ. ಇದಲ್ಲದೆ ಬಾಂಗ್ಲಾದೇಶ ವಿರುದ್ಧ ಸೋತಿರುವ ಪಾಕಿಸ್ತಾನಕ್ಕೆ ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರಿ ಹೊಡೆತಬಿದ್ದಿದ್ದು, ತಂಡ ಎಂಟನೇ ಸ್ಥಾನಕ್ಕೆ ಜಾರಿದೆ. ಇತ್ತ ಬಾಂಗ್ಲಾದೇಶ ಗಳಿಸಿದ ಅಂಕಗಳಿಂದಲೂ ಮೂರು ಅಂಕಗಳನ್ನು ಕಡಿತಗೊಳಿಸಲಾಗಿದೆ.

ಇನ್ನು ಪಂದ್ಯದ ಕುರಿತು ಮಾತನಾಡುವುದಾದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 6 ವಿಕೆಟ್‌ಗೆ 448 ರನ್ ಗಳಿಸಿ ತನ್ನ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 565 ರನ್ ಗಳಿಸಿ, ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡ ಬ್ಯಾಟಿಂಗ್ ವಿಭಾಗ ಸಂಪೂರ್ಣ ವಿಫಲವಾಗಿದ್ದು, ಇಡೀ ತಂಡ 146 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್ನ ಮುನ್ನಡೆಯ ಆಧಾರದ ಮೇಲೆ ಬಾಂಗ್ಲಾದೇಶ ತಂಡಕ್ಕೆ ಕೇವಲ 30 ರನ್ಗಳ ಗುರಿ ಸಿಕ್ಕಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಯಾವುದೇ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿ ಪಂದ್ಯವನ್ನು ಹತ್ತು ವಿಕೆಟ್‌ಗಳಿಂದ ಗೆದ್ದುಕೊಂಡಿತು.