
ಟಿ20 ಲೀಗ್ ಕ್ರಿಕೆಟ್ನಲ್ಲಿ ಪರ್ತ್ ಸ್ಕಾಚರ್ಸ್ (Perth Scorchers) ತಂಡ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಮುಂಬೈ ಇಂಡಿಯನ್ಸ್ (MI) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳ ಭರ್ಜರಿ ದಾಖಲೆಗಳನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.

ಬಿಗ್ ಬ್ಯಾಷ್ ಲೀಗ್ನ 15ನೇ ಸೀಸನ್ನಲ್ಲಿ ಪರ್ತ್ ಸ್ಕಾಚರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ನೀಡಿದ 133 ರನ್ಗಳ ಗುರಿಯನ್ನು ಪರ್ತ್ ಸ್ಕಾಚರ್ಸ್ ತಂಡವು ಕೇವಲ 17.3 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಪರ್ತ್ ಪಡೆ 6ನೇ ಬಾರಿ ಬಿಗ್ ಬ್ಯಾಷ್ ಲೀಗ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಇದರೊಂದಿಗೆ ಲೀಗ್ ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡವೆಂಬ ಖ್ಯಾತಿ ಪರ್ತ್ ಸ್ಕಾಚರ್ಸ್ ತಂಡದ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಹೆಸರಿನಲ್ಲಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. 2010 ರಲ್ಲಿ ಮೊದಲ ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದ್ದ ಸಿಎಸ್ಕೆ ಆ ಬಳಿಕ 2011, 2018, 2021, 2023 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದರು.

ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಕೂಡ ಐಪಿಎಲ್ನಲ್ಲಿ 5 ಬಾರಿ ಟ್ರೋಫಿ ಎತ್ತಿ ಹಿಡಿದಿದ್ದರು. 2013, 2015, 2017, 2019, 2020 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಮುಂಬೈ ಇಂಡಿಯನ್ಸ್ ಒಂದೇ ಲೀಗ್ನಲ್ಲಿ 5 ಬಾರಿ ಪ್ರಶಸ್ತಿ ಗೆದ್ದ ತಂಡ ಎನಿಸಿಕೊಂಡಿತ್ತು.

ಇದೀಗ ಬಿಗ್ ಬ್ಯಾಷ್ ಲೀಗ್ನಲ್ಲಿ 6ನೇ ಬಾರಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಪರ್ತ್ ಸ್ಕಾಚರ್ಸ್ ತಂಡ ಯಶಸ್ವಿಯಾಗಿದೆ. 2013–14, 2014–15, 2016–17, 2021–22, 2022–23 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಪರ್ತ್ ಪಡೆ ಇದೀಗ 2025-26ರ ಸೀಸನ್ನಲ್ಲೂ ಕಿರೀಟ ಮುಡಿಗೇರಿಸಿಕೊಂಡಿದೆ. ಈ ಮೂಲಕ ಟಿ20 ಲೀಗ್ ಟೂರ್ನಿಯಲ್ಲಿ ಅತ್ಯಧಿಕ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡವೆಂಬ ವಿಶ್ವ ದಾಖಲೆಯನ್ನು ಪರ್ತ್ ಸ್ಕಾಚರ್ಸ್ ತನ್ನದಾಗಿಸಿಕೊಂಡಿದೆ.