
ಉದಯೋನ್ಮುಖ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಅಫ್ಘಾನಿಸ್ತಾನ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಅಫ್ಘಾನ್ ಪಡೆ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಅಫ್ಘಾನಿಸ್ತಾನ್ ತಂಡದ ಈ ಗೆಲುವಿನ ರೂವಾರಿ ಸೆದಿಖುಲ್ಲಾ ಅಟಲ್.

ಅಫ್ಘಾನಿಸ್ತಾನ್ ಪರ ಆರಂಭಿಕನಾಗಿ ಕಣಕ್ಕಿಳಿದ ಸೆದಿಖುಲ್ಲಾ ಅಟಲ್ 5 ಪಂದ್ಯಗಳಿಂದ ಕಲೆಹಾಕಿದ್ದು ಬರೋಬ್ಬರಿ 368 ರನ್ಗಳು. ಈ ಮೂಲಕ ಎಮರ್ಜಿಂಗ್ ಏಷ್ಯಾಕಪ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ದಾಖಲೆಯನ್ನು ಅಫ್ಘಾನಿಸ್ತಾನದ 23 ವರ್ಷದ ಯುವ ದಾಂಡಿಗ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಚರಿತ್ ಅಸಲಂಕಾ ಹೆಸರಿನಲ್ಲಿತ್ತು. 2017 ರ ಎಮರ್ಜಿಂಗ್ ಏಷ್ಯಾಕಪ್ನಲ್ಲಿ ಅಸಲಂಕಾ 338 ರನ್ಗಳನ್ನು ಕಲೆಹಾಕಿ ಈ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿ ಸೆದಿಖುಲ್ಲಾ ಅಟಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಈ ಬಾರಿ ಎಮರ್ಜಿಂಗ್ ಏಷ್ಯಾಕಪ್ನಲ್ಲಿ ಅಫ್ಘಾನಿಸ್ತಾನ್ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿರುವ ಸೆದಿಖುಲ್ಲಾ ಅಟಲ್ 5 ಇನಿಂಗ್ಸ್ಗಳಲ್ಲೂ ಅರ್ಧಶತಕ ಬಾರಿಸಿದ್ದು ವಿಶೇಷ. ಈ ಮೂಲಕ 368 ರನ್ ಕಲೆಹಾಕಿದ್ದಾರೆ. ಇದೇ ವೇಳೆ 23 ಫೋರ್ ಹಾಗೂ 19 ಸಿಕ್ಸ್ಗಳನ್ನು ಸಹ ಸಿಡಿಸಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಸೆದಿಖುಲ್ಲಾ ಅಟಲ್ ಅಫ್ಘಾನಿಸ್ತಾನ್ ಹಿರಿಯರ ತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ಅಂದಹಾಗೆ ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಕೆಎಲ್ ರಾಹುಲ್ ಹೆಸರಿನಲ್ಲಿದೆ. 2013 ರಲ್ಲಿ ರಾಹುಲ್ ಒಟ್ಟು 321 ರನ್ ಗಳಿಸುವ ಮೂಲಕ ಈ ದಾಖಲೆ ಬರೆದಿದ್ದಾರೆ. ಕಳೆದ 11 ವರ್ಷಗಳಿಂದ ಈ ದಾಖಲೆಯನ್ನು ಮುರಿಯಲು ಭಾರತದ ಯಾವುದೇ ಕಿರಿಯ ಬ್ಯಾಟರ್ಗೆ ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.