IND vs WI: ಮಂಧಾನ ಮುಟ್ಟಿದ್ದೆಲ್ಲ ಚಿನ್ನ; ಸತತ 6ನೇ ಪಂದ್ಯದಲ್ಲಿ 50+ ಸ್ಕೋರ್ ಕಲೆಹಾಕಿದ ಸ್ಮೃತಿ
Smriti Mandhana: ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧಾನ ಅವರು ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸತತ ಆರನೇ ಪಂದ್ಯದಲ್ಲೂ 50 ಕ್ಕಿಂತ ಹೆಚ್ಚು ರನ್ ಗಳಿಸಿರುವ ಅವರು ಈ ಪಂದ್ಯದಲ್ಲಿ 53 ರನ್ ಗಳಿಸಿದ್ದಾರೆ. ಇದರಿಂದ ಭಾರತ ತಂಡಕ್ಕೆ ಉತ್ತಮ ಆರಂಭ ದೊರೆತಿದೆ. ಆಸ್ಟ್ರೇಲಿಯಾ ಪ್ರವಾಸದಿಂದಲೂ ಅವರ ಈ ಅದ್ಭುತ ಫಾರ್ಮ್ ಮುಂದುವರೆದಿದೆ.
1 / 8
ಭಾರತ ಹಾಗೂ ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವೆ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲೂ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿದೆ. ಆರಂಭಿಕರಿಬ್ಬರು ಮೊದಲ ವಿಕೆಟ್ಗೆ ಶತಕದ ಜೊತೆಯಾಟ ನೀಡಿದ್ದಾರೆ. ಈ ವೇಳೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅಮೋಘ ಅರ್ಧಶತಕ ಕೂಡ ಬಾರಿಸಿದರು.
2 / 8
ಇದು ಸ್ಮೃತಿ ಅವರು ಸತತ 6ನೇ ಪಂದ್ಯದಲ್ಲಿ ಸಿಡಿಸಿದ 50+ ಸ್ಕೋರ್ ಆಗಿದೆ. ಆಸ್ಟ್ರೇಲಿಯಾ ಪ್ರವಾಸದ ಆಡಿದ ಏಕದಿನ ಸರಣಿಯ ಕೊನೆಯ ಪಂದ್ಯ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ನಡೆದ 3 ಟಿ20 ಪಂದ್ಯಗಳು ಹಾಗೂ ಇದೀಗ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಸ್ಮೃತಿ ಅವರ ಬ್ಯಾಟ್ ಅಬ್ಬರ ಸೃಷ್ಟಿಸಿದೆ.
3 / 8
ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿತ್ತಾದರೂ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ್ದ ಸ್ಮೃತಿ ಮಂಧಾನ 109 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 105 ರನ್ಗಳ ಇನ್ನಿಂಗ್ಸ್ ಆಡಿದ್ದರು.
4 / 8
ಆ ಬಳಿಕ ವೆಸ್ಟ್ ಇಂಡೀಸ್ ವಿರುದ್ಧ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲೂ ತಂಡದ ಪರ ಅರ್ಧಶತಕ ಸಿಡಿಸಿದ್ದ ಸ್ಮೃತಿ ಮಂಧಾನ 33 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 54 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ 49 ರನ್ಗಳ ಜಯ ಸಾಧಿಸಿತ್ತು.
5 / 8
ಇನ್ನು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲೇ ನಡೆದ ಎರಡನೇ ಟಿ20 ಪಂದ್ಯದಲ್ಲೂ ಅಬ್ಬರಿಸಿದ್ದ ಸ್ಮೃತಿ 41 ಎಸೆತಗಳಲ್ಲಿ 62 ರನ್ಗಳ ಇನ್ನಿಂಗ್ಸ್ ಆಡಿದ್ದರು. ಅವರ ಈ ಇನ್ನಿಂಗ್ಸ್ನಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಸೇರಿತ್ತು. ಆದರೆ ಈ ಪಂದ್ಯದಲ್ಲಿ ಭಾರತ 9 ವಿಕೆಟ್ಗಳ ಸೋಲು ಕಂಡಿತ್ತು.
6 / 8
ಮೂರನೇ ಪಂದ್ಯದಲ್ಲೂ ಮತ್ತೊಮ್ಮೆ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ಸ್ಮೃತಿ ಮಂಧಾನ 47 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 77 ರನ್ ಕಲೆಹಾಕಿದರು. ಸ್ಮೃತಿ ಈ ಸಿಡಿಲಬ್ಬರದಿಂದ ನಿಗದಿತ 20 ಓವರ್ಗಳಲ್ಲಿ 214 ರನ್ ಕಲೆಹಾಕಿದ್ದ ಭಾರತ 60 ರನ್ಗಳಿಂದ ವಿಂಡೀಸ್ ಪಡೆಯನ್ನು ಮಣಿಸಿತ್ತು.
7 / 8
ಟಿ20 ಸರಣಿ ಮುಗಿದ ಬಳಿಕ ಆರಂಭವಾಗಿರುವ ಏಕದಿನ ಸರಣಿಯಲ್ಲೂ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿರುವ ಸ್ಮೃತಿ ಮೊದಲ ಏಕದಿನ ಪಂದ್ಯದಲ್ಲಿ 91 ರನ್ಗಳ ಇನ್ನಿಂಗ್ಸ್ ಆಡಿದರು. ಕೇವಲ 9 ರನ್ಗಳಿಂದ ಶತಕ ವಂಚಿತರಾಗಿದ್ದ ಸ್ಮೃತಿ ಈ ಪಂದ್ಯದಲ್ಲಿ 13 ಬೌಂಡರಿಗಳನ್ನು ಹೊಡೆದಿದ್ದರು.
8 / 8
ಇದೀಗ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲೂ ಅರ್ಧಶತಕದ ಇನ್ನಿಂಗ್ಸ್ ಆಡಿರುವ ಸ್ಮೃತಿ ಮಂಧಾನ 47 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 53 ರನ್ ಬಾರಿಸಿ ರನೌಟ್ಗೆ ಬಲಿಯಾದರು. ಆದಾಗ್ಯೂ ಮೊದಲ ವಿಕೆಟ್ಗೆ ಯುವ ಓಪನರ್ ಪ್ರತೀಕಾ ರಾವಲ್ ಅವರೊಂದಿಗೆ 110 ರನ್ಗಳ ಶತಕದ ಜೊತೆಯಾಟವನ್ನು ಆಡಿದರು.
Published On - 3:52 pm, Tue, 24 December 24