
ಭಾರತೀಯ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸತತ ಎರಡನೇ ಪಂದ್ಯದಲ್ಲೂ ವಿಫಲರಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 8 ರನ್ ಗಳಿಸಿದ್ದ ಸ್ಮೃತಿ ಅವರಿಂದ ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಿತ್ತು. ಆದರೆ ಅವರು ಮತ್ತೊಮ್ಮೆ ತಂಡವನ್ನು ನಿರಾಶೆಗೊಳಿಸಿದ್ದಾರೆ.

ಪಾಕ್ ವಿರುದ್ಧದ ಪಂದ್ಯದಲ್ಲಿ 32 ಎಸೆತಗಳನ್ನು ಎದುರಿಸಿ ನಾಲ್ಕು ಬೌಂಡರಿ ಸೇರಿದಂತೆ ಕೇವಲ 23 ರನ್‌ಗಳಿಸಿ ಔಟಾದರು. ಈ ಮೂಲಕ ಸ್ಮೃತಿ ಕೇವಲ 12 ರನ್‌ಗಳ ಅಂತರದಿಂದ ವಿಶ್ವ ದಾಖಲೆಯನ್ನು ಸೃಷ್ಟಿಸುವ ಅವಕಾಶವನ್ನು ಈ ಪಂದ್ಯದಲ್ಲಿ ಕಳೆದುಕೊಂಡರು. ಈ ಪಂದ್ಯದಲ್ಲಿ ಅವರು 12 ರನ್ ಗಳಿಸಿದ್ದರೆ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗುತ್ತಿದ್ದರು, ಆದರೆ ಅದು ಆಗಲಿಲ್ಲ.

2025 ರಲ್ಲಿ ಸ್ಮೃತಿ ಮಂಧಾನಾ ಅವರ ಪ್ರದರ್ಶನ ಅತ್ಯುತ್ತಮವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಶತಕಗಳನ್ನು ಬಾರಿಸಿದ ಸ್ಮೃತಿ 2025 ರಲ್ಲಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 959 ರನ್ ಗಳಿಸಿದ್ದಾರೆ. ಇದೀಗ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿರುವ ಸ್ಮೃತಿ, ಮುಂದಿನ ಪಂದ್ಯದಲ್ಲಿ 12 ರನ್ ಬಾರಿಸಿದರೆ 28 ವರ್ಷಗಳ ದಾಖಲೆ ಮುರಿಯಲಿದ್ದಾರೆ.

ವಾಸ್ತವವಾಗಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು 1997 ರಲ್ಲಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 970 ರನ್ ಗಳಿಸಿದ್ದ ಬ್ಲೆಂಡಾ ಕ್ಲಾರ್ಕ್ ಹೊಂದಿದ್ದಾರೆ. ಈಗ, ಭಾರತದ ಸ್ಮೃತಿ ಮಂಧಾನಾ ಈ ವಿಶ್ವ ದಾಖಲೆಯನ್ನು ಮುರಿಯಲು ಕೇವಲ 12 ರನ್‌ಗಳ ದೂರದಲ್ಲಿದ್ದಾರೆ. ಮುಂಬರುವ ಮಹಿಳಾ ವಿಶ್ವಕಪ್ ಪಂದ್ಯಗಳಲ್ಲಿ ಅವರು ಈ ದಾಖಲೆಯನ್ನು ಸುಲಭವಾಗಿ ಮುರಿಯಬಹುದು.

ಆದಾಗ್ಯೂ ಏಕದಿನ ವಿಶ್ವಕಪ್‌ನಲ್ಲಿ ಸ್ಮೃತಿ ಮಂಧಾನ ಅವರ ಪ್ರಸ್ತುತ ಫಾರ್ಮ್ ತಂಡಕ್ಕೆ ಕಳವಳಕಾರಿಯಾಗಿದೆ. ಏಕೆಂದರೆ ವಿಶ್ವಕಪ್ಗೂ ಮುನ್ನ ಸ್ಮೃತಿ ಮಂಧಾನ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಶತಕಗಳನ್ನು ಗಳಿಸಿ, ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದರು.

ಇನ್ನು ಪಾಕಿಸ್ತಾನದ ವಿರುದ್ಧ ತಮ್ಮ ಕಳಪೆ ಆಟವನ್ನು ಮುಂದುವರೆಸಿರುವ ಸ್ಮೃತಿ ಮಂಧಾನ ಇದುವರೆಗೆ ಪಾಕಿಸ್ತಾನ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಿದ್ದು, ಒಂದು ಅರ್ಧಶತಕ ಸೇರಿದಂತೆ 25.66 ಸರಾಸರಿಯಲ್ಲಿ ಕೇವಲ 77 ರನ್ ಗಳಿಸಿದ್ದಾರೆ. ಹಾಗೆಯೇ ಪಾಕಿಸ್ತಾನ ವಿರುದ್ಧ 10 ಟಿ20 ಪಂದ್ಯಗಳನ್ನು ಆಡಿರುವ ಅವರು 26.55 ಸರಾಸರಿಯಲ್ಲಿ 239 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಅರ್ಧಶತಕವೂ ಸೇರಿದೆ.
Published On - 6:22 pm, Sun, 5 October 25