
ನ್ಯೂಝಿಲೆಂಡ್ ತಂಡದ ಸ್ಟಾರ್ ಆಟಗಾರ್ತಿ ಸೋಫಿ ಡಿವೈನ್ (Sophie Devine) ಏಕದಿನ ಕ್ರಿಕೆಟ್ಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ. ಅದು ಕೂಡ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ವಿಶ್ವಕಪ್ ಮೂಲಕ ಎಂಬುದು ವಿಶೇಷ. ಸೆಪ್ಟೆಂಬರ್ 30 ರಿಂದ ಶುರುವಾಗಲಿರುವ ಈ ಬಾರಿಯ ಒಡಿಐ ವರ್ಲ್ಡ್ಕಪ್ಗೆ ಭಾರತ ಮತ್ತು ಶ್ರೀಲಂಕಾ ಆತಿಥ್ಯವಹಿಸಲಿದೆ. ಈ ಟೂರ್ನಿಯ ಬಹುತೇಕ ಪಂದ್ಯಗಳು ಭಾರತದಲ್ಲೇ ನಡೆಯಲಿದೆ.

ಈ ಪಂದ್ಯಗಳ ಮೂಲಕ ನ್ಯೂಝಿಲೆಂಡ್ ತಂಡವು ಫೈನಲ್ಗೆ ಪ್ರವೇಶಿಸಿದರೆ ಅದುವೇ ಸೋಫಿ ಡಿವೈನ್ ಅವರ ಕೊನೆಯ ಏಕದಿನ ಪಂದ್ಯವಾಗಿರಲಿದೆ. ಇತ್ತ ಏಕದಿನ ವಿಶ್ವಕಪ್ 2025ರ ಫೈನಲ್ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಸಾಧ್ಯತೆಯಿದೆ. ಅಂದರೆ ಪಾಕ್ ತಂಡವು ಫೈನಲ್ಗೆ ಪ್ರವೇಶಿಸಿದರೆ ಮಾತ್ರ ಅಂತಿಮ ಪಂದ್ಯವನ್ನು ಕೊಲಂಬೊದಲ್ಲಿ ಆಯೋಜಿಸಲಾಗುತ್ತದೆ.

ಇನ್ನು ಬೇರೆ ಯಾವುದೇ ತಂಡಗಳು ಫೈನಲ್ಗೆ ಪ್ರವೇಶಿಸಿದರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಮೂಲಕ ಸೋಫಿ ಡಿವೈನ್ ಆರ್ಸಿಬಿ ತಂಡದ ತವರು ಮೈದಾನದಲ್ಲಿ ಏಕದಿನ ಕ್ರಿಕೆಟ್ ವೃತ್ತಿಜೀವನವನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ. ಒಂದು ವೇಳೆ ನ್ಯೂಝಿಲೆಂಡ್ ತಂಡವು ಫೈನಲ್ಗೆ ಪ್ರವೇಶಿಸಲು ವಿಫಲರಾದರೆ, ಕಿವೀಸ್ ಪಡೆ ಆಡುವ ಕೊನೆಯ ಪಂದ್ಯವೇ ಸೋಫಿ ಅವರ ಅಂತಿಮ ಒಡಿಐ ಪಂದ್ಯವಾಗಿರಲಿದೆ.

ಅಂದಹಾಗೆ ಸೋಫಿ ಡಿವೈನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ್ತಿ. ಕಳೆದ ಎರಡು ಸೀಸನ್ಗಳಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದ ಡಿವೈನ್ 2024 ರಲ್ಲಿ ರಾಯಲ್ ಪಡೆ ಚಾಂಪಿಯನ್ ಪಟ್ಟಕ್ಕೇರಲು ಪ್ರಮುಖ ಪಾತ್ರವಹಿಸಿದ್ದರು. ಆದರೆ ವೈಯುಕ್ತಿಕ ಕಾರಣಗಳಿಂದಾಗಿ ಅವರು 2025 ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಕಾಣಿಸಿಕೊಂಡಿರಲಿಲ್ಲ.

ಇದೀಗ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿರುವ ಸೋಫಿ ಡಿವೈನ್ ಟಿ20 ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಅದರಂತೆ ಮುಂಬರುವ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲೂ ಕಾಣಿಸಿಕೊಳ್ಳುವುದಾಗಿ 35 ವರ್ಷದ ಕಿವೀಸ್ ಆಟಗಾರ್ತಿ ತಿಳಿಸಿದ್ದಾರೆ. ಅದರಂತೆ ಈ ಬಾರಿಯ ವಿಶ್ವಕಪ್ ಸೋಫಿ ಡಿವೈನ್ ಪಾಲಿನ ಕೊನೆಯ ಐಸಿಸಿ ಏಕದಿನ ಟೂರ್ನಿ ಆಗಿರಲಿದೆ.