South Africa: ವಿಶ್ವಕಪ್ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಸೌತ್ ಆಫ್ರಿಕಾ
T20 World Cup 2024: ಸೌತ್ ಆಫ್ರಿಕಾ ತಂಡವು ಈವರೆಗೆ 8 ಐಸಿಸಿ ವಿಶ್ವಕಪ್ ಸೆಮಿಫೈನಲ್ ಆಡಿದೆ. ಈ ವೇಳೆ 7 ಪಂದ್ಯಗಳಲ್ಲಿ ಸೋಲನುಭವಿಸಿದೆ. ಇದೀಗ ಅಫ್ಘಾನಿಸ್ತಾನ್ ವಿರುದ್ಧ ವಿಜಯ ಸಾಧಿಸುವ ಮೂಲಕ ಸೌತ್ ಆಫ್ರಿಕಾ ತಂಡವು ಚೊಚ್ಚಲ ಬಾರಿಗೆ ಫೈನಲ್ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಈ ಫೈನಲ್ ಎಂಟ್ರಿಯೊಂದಿಗೆ ಸೌತ್ ಆಫ್ರಿಕಾ ತಂಡವು ವಿಶೇಷ ವಿಶ್ವ ದಾಖಲೆಯನ್ನು ಕೂಡ ನಿರ್ಮಿಸಿದೆ.
1 / 6
T20 World Cup 2024: ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಸೌತ್ ಆಫ್ರಿಕಾ (South Africa) ತಂಡ ಫೈನಲ್ಗೆ ಪ್ರವೇಶಿಸಿದೆ. ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡ 56 ರನ್ಗಳಿಗೆ ಆಲೌಟ್ ಆದರೆ, ಸೌತ್ ಆಫ್ರಿಕಾ ತಂಡವು ಈ ಗುರಿಯನ್ನು 8.5 ಓವರ್ಗಳಲ್ಲಿ ಚೇಸ್ ಮಾಡಿತು. ಈ ಮೂಲಕ 9 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿ ಮಾರ್ಕ್ರಾಮ್ ಪಡೆ ಫೈನಲ್ಗೆ ಎಂಟ್ರಿ ಕೊಟ್ಟಿದೆ.
2 / 6
ವಿಶೇಷ ಎಂದರೆ ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ ತಂಡವು ಟಿ20 ವಿಶ್ವಕಪ್ನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದೆ. ಅದು ಸಹ ಸತತ ಗೆಲುವುಗಳ ಮೂಲಕ ಎಂಬುದು ವಿಶೇಷ. ಅಂದರೆ ಟಿ20 ವಿಶ್ವಕಪ್ ಇತಿಹಾಸದ ಆವೃತ್ತಿಯೊಂದರಲ್ಲಿ ಸತತ ಗೆಲುವು ಸಾಧಿಸಿ ಫೈನಲ್ಗೆ ಪ್ರವೇಶಿಸಿದ ಮೊದಲ ತಂಡವೆಂಬ ಕೀರ್ತಿ ಸೌತ್ ಆಫ್ರಿಕಾ ಪಾಲಾಗಿದೆ.
3 / 6
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ 8 ಪಂದ್ಯಗಳನ್ನಾಡಿರುವ ಸೌತ್ ಆಫ್ರಿಕಾ ತಂಡವು ಒಂದೇ ಒಂದು ಸೋಲನುಭವಿಸಿಲ್ಲ. ಈ ಮೂಲಕ ಸತತ ಎಂಟು ಗೆಲುವುಗಳೊಂದಿಗೆ ಆಫ್ರಿಕನ್ನರು ಇದೀಗ ಫೈನಲ್ ಸುತ್ತಿಗೆ ಪ್ರವೇಶಿಸಿದೆ. ಇದರೊಂದಿಗೆ ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ಸತತ ಗೆಲುವು ದಾಖಲಿಸಿದ ವಿಶೇಷ ದಾಖಲೆಯೊಂದು ಸೌತ್ ಆಫ್ರಿಕಾ ಹೆಸರಿಗೆ ಸೇರ್ಪಡೆಯಾಗಿದೆ.
4 / 6
ಇದಕ್ಕೂ ಮುನ್ನ ಇಂತಹದೊಂದು ದಾಖಲೆ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳ ಹೆಸರಿನಲ್ಲಿತ್ತು. 2009 ರ ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡ ಸತತ 6 ಗೆಲುವು ದಾಖಲಿಸಿ ದಾಖಲೆ ಬರೆದಿತ್ತು. ಇದಾದ ಬಳಿಕ 2010 ರಲ್ಲಿ ಆಸ್ಟ್ರೇಲಿಯಾ ತಂಡ ಸತತ 6 ಜಯ ಸಾಧಿಸಿ ಈ ದಾಖಲೆಯನ್ನು ಸರಿಗಟ್ಟಿತ್ತು. ಇನ್ನು 2021 ರಲ್ಲೂ ಆಸ್ಟ್ರೇಲಿಯಾ 6 ಗೆಲುವುಗಳೊಂದಿಗೆ ಈ ದಾಖಲೆಯನ್ನು ಪುನರಾವರ್ತಿಸಿತ್ತು.
5 / 6
ಇದೀಗ ಈ ದಾಖಲೆಗಳನ್ನು ಅಳಿಸಿ ಹಾಕಿ ಸೌತ್ ಆಫ್ರಿಕಾ ತಂಡವು ಸತತ 8 ವಿಜಯಗಳೊಂದಿಗೆ ಹೊಸ ಇತಿಹಾಸ ನಿರ್ಮಿಸಿದೆ. ಹಾಗೆಯೇ ಟಿ20 ವಿಶ್ವಕಪ್ನಲ್ಲಿ ಸತತ 8 ಗೆಲುವು ದಾಖಲಿಸಿದ ವಿಶ್ವ ದಾಖಲೆಯನ್ನು ಸಹ ಸರಿಗಟ್ಟಿದೆ. 2022-2024 ರ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಸತತ 8 ಗೆಲುವು ದಾಖಲಿಸಿ ಈ ದಾಖಲೆ ನಿರ್ಮಿಸಿದೆ. ಇದೀಗ ಒಂದೇ ವಿಶ್ವಕಪ್ ಮೂಲಕ ಸೌತ್ ಆಫ್ರಿಕಾ ಈ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದೆ.
6 / 6
ಇದೀಗ ಫೈನಲ್ ಪ್ರವೇಶಿಸಿರುವ ಸೌತ್ ಆಫ್ರಿಕಾ ತಂಡವು ಅಂತಿಮ ಪಂದ್ಯದಲ್ಲಿ ಜಯಭೇರಿ ಬಾರಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅಂದರೆ ಟಿ20 ವಿಶ್ವಕಪ್ನಲ್ಲಿ ಸತತವಾಗಿ ಅತೀ ಹೆಚ್ಚು ಪಂದ್ಯಗಳಲ್ಲಿ ಜಯ ಸಾಧಿಸಿ ವಿಶ್ವ ದಾಖಲೆ ನಿರ್ಮಿಸಲು ಆಫ್ರಿಕನ್ನರಿಗೆ ಒಂದು ಗೆಲುವಿನ ಅಗತ್ಯವಿದೆ. ಅದರಂತೆ ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೌತ್ ಆಫ್ರಿಕಾ ಹೊಸ ಇತಿಹಾಸ ನಿರ್ಮಿಸಲಿದೆಯಾ ಕಾದು ನೋಡಬೇಕಿದೆ.