
2026 ರ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಆರಂಭವಾಗಲಿದೆ. 20 ತಂಡಗಳ ನಡುವೆ ನಡೆಯಲಿರುವ ಈ ಟೂರ್ನಿಗೆ ಇದುವರೆಗೆ 6 ತಂಡಗಳು ಪ್ರಕಟವಾಗಿದ್ದವು. ಇದೀಗ 7ನೇ ತಂಡವಾಗಿ ದಕ್ಷಿಣ ಆಫ್ರಿಕಾ ತಂಡ ಪ್ರಕಟವಾಗಿದೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ ಈ ಮಿನಿ ವಿಶ್ವ ಸಮರಕ್ಕೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.

ದಕ್ಷಿಣ ಆಫ್ರಿಕಾದ ಆಯ್ಕೆದಾರರು ಈ ಪಂದ್ಯಾವಳಿಯಿಂದ ಮೂವರು ಪ್ರಮುಖ ಆಟಗಾರರನ್ನು ಕೈಬಿಟ್ಟಿದ್ದಾರೆ. ಅವರಲ್ಲಿ ಆರಂಭಿಕ ರಯಾನ್ ರಿಕಲ್ಟನ್ ಮತ್ತು ಮಧ್ಯಮ ಕ್ರಮಾಂಕದ ಟ್ರಿಸ್ಟಾನ್ ಸ್ಟಬ್ಸ್ ಅವರಂತಹ ಆಟಗಾರರು ಸೇರಿದ್ದಾರೆ. ಇವರಿಬ್ಬರ ಜೊತೆಗೆ ರೀಜಾ ಹೆಂಡ್ರಿಕ್ಸ್ ಕೂಡ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಉಳಿದಂತೆ ಐಡೆನ್ ಮಾರ್ಕ್ರಾಮ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿದ್ದು, ಈ ತಂಡಕ್ಕೆ ಆಯ್ಕೆಯಾಗಿರುವ ಏಳು ಆಟಗಾರರಿಗೆ ಇದು ಮೊದಲ ಟಿ20 ವಿಶ್ವಕಪ್ ಆಗಿದೆ. ಈ ಆಟಗಾರರಲ್ಲಿ ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಟೋನಿ ಡಿ ಜಾರ್ಜಿ, ಡೊನೊವನ್ ಫೆರೀರಾ, ಜಾರ್ಜ್ ಲಿಂಡೆ, ಕ್ವೆನಾ ಎಂಫಾಕಾ ಮತ್ತು ಜೇಸನ್ ಸ್ಮಿತ್ ಸೇರಿದ್ದಾರೆ.

ಪಕ್ಕೆಲುಬಿನ ಗಾಯದಿಂದಾಗಿ ಭಾರತ ಪ್ರವಾಸದಿಂದ ಹೊರಗುಳಿದಿದ್ದ ಕಗಿಸೊ ರಬಾಡ ತಂಡಕ್ಕೆ ಮರಳಿರುವುದು ತಂಡದ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಿದೆ. ಲುಂಗಿ ಎನ್‌ಗಿಡಿ, ಮಾರ್ಕೋ ಯಾನ್ಸನ್ ಮತ್ತು ಅನ್ರಿಚ್ ನೋಕಿಯಾ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಸ್ಪಿನ್ ವಿಭಾಗವನ್ನು ಕೇಶವ್ ಮಹಾರಾಜ್ ಮುನ್ನಡೆಸಲಿದ್ದಾರೆ.

ಟಿ20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ತಂಡ: ಏಡೆನ್ ಮಾರ್ಕ್ರಾಮ್, ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿ ಕಾಕ್, ಟೋನಿ ಡಿ ಜಾರ್ಗಿ, ಡೊನೊವನ್ ಫೆರೇರಾ, ಮಾರ್ಕೊ ಯಾನ್ಸನ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಕ್ವೆನಾ ಎಂಫಾಕಾ, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನೊಕಿಯಾ, ಕಗಿಸೊ ರಬಾಡ.