
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿ ಸಮಬಲದಲ್ಲಿ ಅಂತ್ಯಕಂಡಿದೆ. ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಅಂತಿಮ ಮೂರನೇ ಟಿ20 ಪಂದ್ಯದಲ್ಲಿ ಭಾರತ ಬರೋಬ್ಬರಿ 106 ರನ್ಗಳ ಜಯ ಸಾಧಿಸಿ ಸರಣಿ 1-1 ಅಂತರದಿಂದ ಸಮಬಲ ಸಾಧಿಸಿತು.

ಈ ಪಂದ್ಯದಲ್ಲಿ ಭಾರತ ಸೂರ್ಯಕುಮಾರ್ ಯಾದವ್ (100) ಅವರ ಅಮೋಘ ಶತಕ ಹಾಗೂ ಯಶಸ್ವಿ ಜೈಸ್ವಾಲ್ 60 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 201 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕುಲ್ದೀಪ್ ಯಾದವ್ (5 ವಿಕೆಟ್) ಸ್ಪಿನ್ ದಾಳಿಗೆ ನಲುಗಿ ಕೇವಲ 95 ರನ್ಗಳಿಗೆ ಆಲೌಟ್ ಆಯಿತು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲಿಗೆ ತನ್ನ ಇಂಜುರಿ ಬಗ್ಗೆ ಮಾತನಾಡಿದ ಸೂರ್ಯ, ನಾನು ಗುಣಮುಖನಾಗಿದ್ದೇನೆ. ನಡೆಯಲು ಸಾಧ್ಯವಾಗುತ್ತಿದೆ, ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ.

ಈ ಗೆಲುವು ತುಂಬಾ ಸಂತೋಷವನ್ನು ನೀಡಿದೆ. ನಾವು ನಿರ್ಭೀತವಾಗಿ ಕ್ರಿಕೆಟ್ ಅನ್ನು ಆಡಲು ಬಯಸುತ್ತೇವೆ. ಮೊದಲು ಬ್ಯಾಟಿಂಗ್ ಮಾಡಿ, ಬೋರ್ಡ್ ಮೇಲೆ ಒಂದಿಷ್ಟು ರನ್ ಹಾಕಿ ಡಿಫೆಂಡ್ ಮಾಡುವ ಯೋಚನೆ ಇತ್ತು. ಅದರಂತೆ ಮಾಡಿದೆವು. ಆಟಗಾರರಿಗೆ ಹೆಚ್ಚು ವಿಶ್ರಾಂತಿ ಇಲ್ಲ. ದಿನ ಬಿಟ್ಟು ದಿನ ಆಟವಾಡುತ್ತಿದ್ದಾರೆ - ಸೂರ್ಯಕುಮಾರ್ ಯಾದವ್.

ಆಟಗಾರರು ತಮಗೆ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸಿರುವುದು ಸಂತೋಷವಾಗಿದೆ. ಕುಲ್ದೀಪ್ ಯಾದವ್ ಯಾವಾಗಲೂ ವಿಕೆಟ್ನ ಹಸಿವಿನಲ್ಲಿ ಇರುತ್ತಾನೆ, ಅವನಿಗೆ ಸಂತೋಷವಿಲ್ಲ. ಇಂದು ಅವರ ಜನ್ಮದಿನವಾಗಿದ್ದು, ಇದೊಂದು ಉತ್ತಮ ಉಡುಗೊರೆಯಾಗಿದೆ. ನೀವು ನಿಮ್ಮ ಆಟವನ್ನು ತಿಳಿದುಕೊಂಡು ಆನಂದಿಸುತ್ತಾ ಆಡಬೇಕು ಎಂದು ಸೂರ್ಯಕುಮಾರ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ನಾಯಕ ಐಡೆನ್ ಮರ್ಕ್ರಮ್, 200 ರನ್ಗಳನ್ನು ಚೇಸ್ ಮಾಡಲಾಗಿಲ್ಲ ಎಂಬ ಬೇಸರವಿದೆ. ಈ ಮೊತ್ತವನ್ನು ಬೆನ್ನಟ್ಟಬಹುದಿತ್ತು. ನಾವು ಫೀಲ್ಡಿಂಗ್ ಮಾಡುವಾಗ ಬ್ಯಾಟರ್ ಚೆಂಡನ್ನು ಎಲ್ಲ ಕಡೆ ಹೊಡೆಯುತ್ತಿದ್ದರು. ಅದನ್ನು ನಾವು ಮಾಡಬೇಕಿತ್ತು. ಈ ಸರಣಿಯಿಂದ ಕೆಲ ವಿಚಾರಗಳಲ್ಲಿ ಕಲಿತಿದ್ದೇವೆ ಎಂಬುದು ಮರ್ಕ್ರಮ್ ಮಾತು.