
ಟಿ20 ವಿಶ್ವಕಪ್ಗೆ 15 ಸದಸ್ಯರುಗಳ ಭಾರತ ತಂಡವನ್ನು ಘೋಷಿಸಲಾಗಿದೆ. ಈ ತಂಡದಲ್ಲಿ ಸ್ಥಾನ ಪಡೆದಿದ್ದ ಟೀಮ್ ಇಂಡಿಯಾದ ಎಡಗೈ ದಾಂಡಿಗ ತಿಲಕ್ ವರ್ಮಾ ಗಾಯಗೊಂಡಿದ್ದಾರೆ. ಈ ಗಾಯದ ಕಾರಣ ಅವರು ಮುಂಬರುವ ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳುವುದು ಅನುಮಾನ.

ಏಕೆಂದರೆ ತೊಡೆಸಂಧು ಗಾಯದ ಸಮಸ್ಯೆಗೆ ಒಳಗಾಗಿರುವ ತಿಲಕ್ ವರ್ಮಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಲಿರುವುದು ಖಚಿತವಾಗಿದೆ. ಆ ಬಳಿಕ ಸಂಪೂರ್ಣ ಫಿಟ್ನೆಸ್ ಸಾಧಿಸಿದರೆ ಮಾತ್ರ ಅವರು ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಒಂದು ವೇಳೆ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ತಿಲಕ್ ವರ್ಮಾ ಕಣಕ್ಕಿಳಿಯದಿದ್ದರೆ ಅವರನ್ನು ಟಿ20 ವಿಶ್ವಕಪ್ನಿಂದ ಕೈ ಬಿಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಟಿ20 ವಿಶ್ವಕಪ್ ಶುರುವಾಗುವುದು ಫೆಬ್ರವರಿ 7 ರಿಂದ. ಅದರೊಳಗೆ ತಿಲಕ್ ವರ್ಮಾ ಸಂಪೂರ್ಣ ಫಿಟ್ನೆಸ್ ಸಾಧಿಸಬೇಕು.

ಇತ್ತ ನ್ಯೂಝಿಲೆಂಡ್ ವಿರುದ್ಧದ ಸರಣಿ ವೇಳೆ ಅವರು ಫಿಟ್ನೆಸ್ ಸಾಧಿಸಲು ಸಾಧ್ಯವಾಗದೇ ಇದ್ದರೆ ಬಿಸಿಸಿಐ ಆಯ್ಕೆ ಸಮಿತಿ ಬದಲಿ ಆಟಗಾರನ ಮೊರೆ ಹೋಗಲಿದ್ದಾರೆ. ಹೀಗೆ ಬದಲಿ ಆಟಗಾರನಾಗಿ ಎಂಟ್ರಿ ಕೊಡಲು ಇತ್ತ ಶ್ರೇಯಸ್ ಅಯ್ಯರ್ ಸಜ್ಜಾಗಿದ್ದಾರೆ.

ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದ ಬ್ಯಾಟರ್. ಈಗಾಗಲೇ ಟಿ20 ಕ್ರಿಕೆಟ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಹೀಗಾಗಿ ತಿಲಕ್ ವರ್ಮಾ ನ್ಯೂಝಿಲೆಂಡ್ ವಿರುದ್ಧದ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿದರೆ ಶ್ರೇಯಸ್ ಅಯ್ಯರ್ಗೆ ಚಾನ್ಸ್ ಸಿಗಬಹುದು. ಹೀಗೆ ಅದೃಷ್ಟ ಖುಲಾಯಿಸಿದರೆ ಶ್ರೇಯಸ್ ಅಯ್ಯರ್ ಮುಂಬರುವ ಟಿ20 ವಿಶ್ವಕಪ್ನಲ್ಲೂ ತಿಲಕ್ ವರ್ಮಾ ಬದಲಿಗೆ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ಟಿ20 ವಿಶ್ವಕಪ್ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.
Published On - 2:27 pm, Thu, 8 January 26