
ನ್ಯೂಜಿಲೆಂಡ್ ತಂಡದ ಅನುಭವಿ ಬೌಲರ್ ಟ್ರೆಂಟ್ ಬೌಲ್ಟ್ ಟಿ20 ಕ್ರಿಕೆಟ್ಗೆ ಹೇಳಿ ಮಾಡಿಸಿದ ಬೌಲರ್ ಎಂಬ ಖ್ಯಾತಿ ಪಡೆದಿದ್ದಾರೆ. ಐಪಿಎಲ್ ಸೇರಿದಂತೆ ವಿಶ್ವದ ಹಲವು ಟಿ20 ಲೀಗ್ಗಳಲ್ಲಿ ಆಡಿರುವ ಟ್ರೆಂಟ್ ಬೌಲ್ಟ್ಗೆ ಈಗಲೂ ಸಾಕಷ್ಟು ಬೇಡಿಕೆಯಿದೆ. ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿರುವ ಟ್ರೆಂಟ್ ಬೌಲ್ಟ್ ಇದೀಗ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ನಲ್ಲೂ ಆಡುತ್ತಿದ್ದಾರೆ.
ನ್ಯೂಜಿಲೆಂಡ್ ಕ್ರಿಕೆಟ್ನಲ್ಲಿ ಅಪಾರ ಅನುಭವ ಹೊಂದಿರುವ ಟ್ರೆಂಟ್ ಬೌಲ್ಟ್ 17 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ. ಅಲ್ಲದೆ 316 ಟಿ20 ಪಂದ್ಯಗಳನ್ನು ಆಡಿದ್ದು ಅವರ ಅನುಭವ ಹಲವು ತಂಡಗಳಿಗೆ ನೆರವಾಗಿದೆ. ಆದಾಗ್ಯೂ ಬೌಲ್ಟ್ ಇಷ್ಟು ಪಂದ್ಯಗಳಲ್ಲಿ ಸಾಧಿಸಲಾಗದ ಸಾಧನೆಯೊಂದನ್ನು ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ನಲ್ಲಿ ಸಾಧಿಸಿದ್ದಾರೆ.
ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ನ ಮೊದಲ ಆವೃತ್ತಿಯಲ್ಲಿ ಎಡಿನ್‌ಬರ್ಗ್ ಕ್ಯಾಸಲ್ ರಾಕರ್ಸ್ ತಂಡದ ಪರ ಆಡುತ್ತಿರುವ ಟ್ರೆಂಟ್ ಬೌಲ್ಟ್, ತಂಡದ ಮೊದಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿದ್ದಾರೆ. ಟ್ರೆಂಟ್ ಬೌಲ್ಟ್ ತಮ್ಮ 17 ವರ್ಷಗಳ ಸುದೀರ್ಘ ಟಿ20 ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಒಂದು ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.
ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ನಲ್ಲಿ ಇಂದು ನಡೆದ ಎಡಿನ್‌ಬರ್ಗ್ ಕ್ಯಾಸಲ್ ರಾಕರ್ಸ್ ಹಾಗೂ ಗ್ಲ್ಯಾಸ್ಗೋ ಕಾಸ್ಮಿಕ್ಸ್ ನಡುವಿನ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ ನಾಲ್ಕು ಓವರ್‌ಗಳನ್ನು ಬೌಲ್ ಮಾಡಿ 24 ರನ್ ನೀಡಿ 5 ವಿಕೆಟ್‌ಗಳನ್ನು ಪಡೆದರು. ಬೌಲ್ಟ್ ಅವರ ಈ ಪ್ರದರ್ಶನದಿಂದಾಗಿ ಎಡಿನ್‌ಬರ್ಗ್ ಕ್ಯಾಸಲ್ ರಾಕರ್ಸ್ ತಂಡ ಈ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ಅಲ್ಲದೆ ಈ ಉತ್ತಮ ಪ್ರದರ್ಶನಕ್ಕೆ ಬೌಲ್ಟ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.
2007 ರಲ್ಲಿ ತಮ್ಮ ಮೊದಲ ಟಿ20 ಪಂದ್ಯವನ್ನು ಆಡಿದ ಟ್ರೆಂಟ್ ಬೌಲ್ಟ್ ಅಂದಿನಿಂದ ಕಳೆದ 17 ವರ್ಷಗಳಲ್ಲಿ, ಅಂತರರಾಷ್ಟ್ರೀಯ ಪಂದ್ಯಗಳು, IPL, BBL, ಮತ್ತು SA20 ಮತ್ತು ಇತರ ವಿವಿಧ ಲೀಗ್‌ಗಳು ಸೇರಿದಂತೆ ಒಟ್ಟು 316 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ತಮ್ಮ ಮೊದಲ 5 ವಿಕೆಟ್ ಗೊಂಚಲು ಸೇರಿದಂತೆ 361 ವಿಕೆಟ್‌ಗಳನ್ನು ಕಬಳಿಸಿದ್ದಾರೆ.