
ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ಗೆ ಚಾಲನೆ ಸಿಕ್ಕಿದ್ದು ಮೊದಲ ಪಂದ್ಯವೇ ರೋಚಕತೆಯಿಂದ ಕೂಡಿತ್ತು. ಮುಂಬೈನ ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಬೌಲಿಂಗ್ನಲ್ಲೂ ಬಿರುಗಾಳಿ ಎಬ್ಬಿಸಿತು. ಪರಿಣಾಮ 143 ರನ್ಗಳ ಬೃಹತ್ ಮೊತ್ತದ ಗೆಲುವು ಸಾಧಿಸಿದೆ.

ಇಡೀ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅಟ್ಟಹಾಸ ಮೆರೆಯಿತು. ಬ್ಯಾಟಿಂಗ್ನಲ್ಲಿ ಓಪನರ್ ಹ್ಯಾಲಿ ಮ್ಯಾಥ್ಯೂಸ್ ಮತ್ತು ಹರ್ಮನ್‌ಪ್ರೀತ್ ಕೌರ್ ಅವರ ಬಿರುಸಿನ ಆಟ ಆಕರ್ಷಣೆ ಆಗಿತ್ತು. ಹ್ಯಾಲಿ ಮ್ಯಾಥ್ಯೂಸ್ 31 ಎಸೆತಗಳಿಂದ 47 ರನ್ ಹೊಡೆದರು. ಇದು 4 ಸಿಕ್ಸರ್, 3 ಬೌಂಡರಿಗಳನ್ನು ಒಳಗೊಂಡಿತ್ತು.

ಕೌರ್ ಕೇವಲ 30 ಎಸೆತಗಳಿಂದ 65 ರನ್ ಚಚ್ಚಿದರು. ಸಿಡಿಸಿದ್ದು 14 ಫೋರ್. ಅದರಲ್ಲೂ ಮೋನಿಕಾ ಪಟೇಲ್ ಅವರ ಒಂದೇ ಓವರ್‌ನಲ್ಲಿ 5 ಬೌಂಡರಿ ಬಾರಿಸುವ ಮೂಲಕ ಕೌರ್ ವಿಶೇಷ ದಾಖಲೆ ಬರೆದರು. ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ ಹಾಫ್ ಸೆಂಚುರಿ ಸಿಡಿಸಿದ ಭಾರತೀಯ ಆಟಗಾರ್ತಿ ಎನಿಸಿಕೊಂಡರು.

ಹರ್ಮನ್‌ಪ್ರೀತ್ ಕೌರ್ ಅವರ ಬ್ಯಾಟಿಂಗ್ ವೈಖರಿ.

ಅಮೇಲಿಯಾ ಕೆರ್ ಕೂಡ ಆಕರ್ಷಕ ಬ್ಯಾಟಿಂಗ್ ನಡೆಸಿದರು. ಅವರ 24 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಜೇಯ 45 ರನ್ ಚಚ್ಚಿದರು. ಪರಿಣಾಮ ಮುಂಬೈ ಇಂಡಿಯನ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿತು.

ಇತ್ತ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡ ಮೊದಲ ಓವರ್‌ನಲ್ಲಿಯೇ ನಾಯಕಿ ಮತ್ತು ತಂಡದ ಅತ್ಯುತ್ತಮ ಬ್ಯಾಟರ್ ಬೆತ್ ಮೂನಿ ಎಡ ಮೊಣಕಾಲಿಗೆ ಗಾಯಮಾಡಿಕೊಂಡು ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಗುಜರಾತ್ ಸೋಲಿಗೆ ಇದೂ ಒಂದು ಕಾರಣವಾಯಿತು.

ದಯಾಳನ್ ಹೇಮಲತಾ 29 ರನ್ಗಳ ಕೊಡುಗೆ ಹೊರತುಪಡಿಸಿ ಗುಜರಾತ್‌ನ ಯಾವ ಆಟಗಾರ್ತಿಯರೂ ಗಮನಾರ್ಹ ಪ್ರದರ್ಶನ ನೀಡಲಿಲ್ಲ. ನಾಲ್ಕು ಬ್ಯಾಟರ್ಗಳು ಸೊನ್ನೆ ಸುತ್ತಿದರು. ಗುಜರಾತ್ ತಂಡ 64 ರನ್‌ಗಳಿಗೆ ಆಲೌಟ್ ಆಗಿ ಮುಂಬೈಗೆ ಶರಣಾಯಿತು. ಮುಂಬೈ ಪರ ಸೈಕಾ ಇಶಾಕ್ಯೂ 4 ವಿಕೆಟ್ ಕಿತ್ತು ಮಿಂಚಿದರು.

ಇಂದು ಟೂರ್ನಿಯ ಮೊದಲ ಡಬಲ್ ಹೆಡರ್ ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೆಗ್ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡವನ್ನು ಎದುರಿಸಲಿದೆ. 7:30ಕ್ಕೆ ಶುರುವಾಗಲಿರುವ ದ್ವಿತೀಯ ಪಂದ್ಯ ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ಆಯೋಜಿಸಲಾಗಿದೆ.