ಇಂದೋರ್ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿನ ರುವಾರಿ ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್. ಏಕೆಂದರೆ ಮೊದಲ ಇನಿಂಗ್ಸ್ನಲ್ಲಿ 3 ವಿಕೆಟ್ ಕಬಳಿಸಿ ಮಿಂಚಿದ್ದ ಲಿಯಾನ್ ದ್ವಿತೀಯ ಇನಿಂಗ್ಸ್ನಲ್ಲಿ ಭಾರತ ತಂಡದ 8 ಮಂದಿಯನ್ನು ಪೆವಿಲಿಯನ್ಗಟ್ಟಿದ್ದರು.
ಈ 11 ವಿಕೆಟ್ಗಳೊಂದಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅತ್ಯಂತ ಯಶಸ್ವಿ ಬೌಲರ್ ಎಂಬ ದಾಖಲೆಯು ನಾಥನ್ ಲಿಯಾನ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಹೆಸರಿನಲ್ಲಿತ್ತು.
ಅನಿಲ್ ಕುಂಬ್ಳೆ 1996 ರಿಂದ 2008 ರವರೆಗೆ ಆಸ್ಟ್ರೇಲಿಯಾ ವಿರುದ್ಧ 20 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಈ ವೇಳೆ ಎಸೆದ 1086 ಓವರ್ಗಳಲ್ಲಿ ಕುಂಬ್ಳೆ ಒಟ್ಟು 111 ವಿಕೆಟ್ಗಳನ್ನು ಕಬಳಿಸಿದ್ದರು. ಈ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ದಾಖಲೆ ನಿರ್ಮಿಸಿದ್ದರು.
ಇದೀಗ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 25 ಪಂದ್ಯಗಳಲ್ಲಿ 1164.4 ಓವರ್ಗಳನ್ನು ಎಸೆದಿರುವ ನಾಥನ್ ಲಿಯಾನ್ ಒಟ್ಟು 113 ವಿಕೆಟ್ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ ದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವುದು ರವಿಚಂದ್ರನ್ ಅಶ್ವಿನ್. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಒಟ್ಟು 1122.3 ಓವರ್ಗಳನ್ನು ಎಸೆದಿರುವ ಅಶ್ವಿನ್ 107 ವಿಕೆಟ್ ಉರುಳಿಸಿದ್ದಾರೆ. ಇದೀಗ ಅಗ್ರಸ್ಥಾನದಲ್ಲಿರುವ ಲಿಯಾನ್ ದಾಖಲೆ ಮುರಿಯಲು ಅಶ್ವಿನ್ಗೆ ಕೇವಲ 7 ವಿಕೆಟ್ಗಳ ಅವಶ್ಯಕತೆಯಿದೆ.
ಇಲ್ಲಿ ಮತ್ತೊಂದು ವಿಶೇಷತೆ ಎಂದರೆ ಅನಿಲ್ ಕುಂಬ್ಳೆ, ನಾಥನ್ ಲಿಯಾನ್ ಹಾಗೂ ಅಶ್ವಿನ್ ಅವರನ್ನು ಹೊರತುಪಡಿಸಿದರೆ, ಯಾವುದೇ ಬೌಲರ್ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 100 ಅಥವಾ ನೂರಕ್ಕಿಂತ ಹೆಚ್ಚು ವಿಕೆಟ್ ಪಡೆದಿಲ್ಲ. ಇದೀಗ ಟಾಪ್-3 ನಲ್ಲಿರುವ ನಾಥನ್ ಲಿಯಾನ್ ಹಾಗೂ ಅಶ್ವಿನ್ ನಡುವೆ ಅಗ್ರಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿರುವುದು ವಿಶೇಷ.
ಇನ್ನು ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ 4ನೇ ಸ್ಥಾನದಲ್ಲಿದ್ದು, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 18 ಪಂದ್ಯಗಳಿಂದ ಒಟ್ಟು 95 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಹಾಗೆಯೇ ಐದನೇ ಸ್ಥಾನದಲ್ಲಿರುವ ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ 15 ಪಂದ್ಯಗಳಿಂದ ಒಟ್ಟು 84 ವಿಕೆಟ್ಗಳನ್ನು ಪಡೆದಿದ್ದಾರೆ.
Published On - 6:09 pm, Sat, 4 March 23