

ಕಳೆದ 14 ವರ್ಷಗಳಿಂದ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಕೊಹ್ಲಿ, ಈ ಮೈದಾನದಲ್ಲಿ ಹಲವು ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ಭಾರತ ಪರ ಕೇವಲ 3 ಟೆಸ್ಟ್ ಪಂದ್ಯಗಳನ್ನಷ್ಟೆ ಆಡಿದ್ದಾರೆ. ಆದರೂ ಅವರ ದಾಖಲೆ ಉತ್ತಮವಾಗಿದೆ. ಕೊಹ್ಲಿ ಈ ಮೈದಾನದಲ್ಲಿ ಆಡಿರುವ 4 ಇನ್ನಿಂಗ್ಸ್ ಗಳಲ್ಲಿ 60 ಕ್ಕಿಂತ ಹೆಚ್ಚು ಸರಾಸರಿಯೊಂದಿಗೆ 181 ರನ್ ಗಳಿಸಿದ್ದಾರೆ.

ಈ ಮೈದಾನದಲ್ಲಿ ಕೊಹ್ಲಿ ಶತಕ ಹಾಗೂ ಅರ್ಧ ಶತಕ ಬಾರಿಸಿರುವುದು ವಿಶೇಷ. ಅವರು ಚಿನ್ನಸ್ವಾಮಿಯಲ್ಲಿ ತಮ್ಮ ಮೊದಲ ಟೆಸ್ಟ್ ಇನ್ನಿಂಗ್ಸ್ನಲ್ಲಿ ಶತಕ ಗಳಿಸಿದ್ದರು. 2012ರಲ್ಲಿ ನ್ಯೂಜಿಲೆಂಡ್ ವಿರುದ್ಧ 103 ರನ್ ಗಳ ಇನ್ನಿಂಗ್ಸ್ ಆಡಿದ್ದರು. ಇದು ಕೊಹ್ಲಿ ವೃತ್ತಿಜೀವನದಲ್ಲಿ ಕೇವಲ ಎರಡನೇ ಮತ್ತು ಭಾರತದಲ್ಲಿ ಸಿಡಿಸಿದ ಮೊದಲ ಶತಕವಾಗಿದೆ. ನಂತರ ಎರಡನೇ ಇನ್ನಿಂಗ್ಸ್ನಲ್ಲಿ 51 ರನ್ ಗಳಿಸಿ ಮಿಂಚಿದ್ದರು.

ಇಷ್ಟೇ ಅಲ್ಲ, ಈ ಟೆಸ್ಟ್ ಪಂದ್ಯ ಹಗಲು-ರಾತ್ರಿ ಪಂದ್ಯವಾಗಿದ್ದು, ಪಿಂಕ್ ಚೆಂಡಿನೊಂದಿಗೆ ಟೆಸ್ಟ್ ಆಡುವ ವಿಚಾರಕ್ಕೆ ಬಂದರೆ ಇಲ್ಲಿಯೂ ಕೊಹ್ಲಿ ಬ್ಯಾಟ್ ಹೆಚ್ಚು ಸದ್ದು ಮಾಡಿದೆ. ಡೇ-ನೈಟ್ ಟೆಸ್ಟ್ಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೊಹ್ಲಿ ಆಗಿದ್ದಾರೆ. ಒಂದು ಶತಕ ಮತ್ತು ಅರ್ಧಶತಕ ಸೇರಿದಂತೆ ಒಟ್ಟು 241 ರನ್ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಗಳಿಸಿದ್ದಾರೆ.
Published On - 11:10 am, Fri, 11 March 22